ಕಡಲೂರು, ತಮಿಳುನಾಡು: ಕಲ್ಲಿದ್ದಲು ಗಣಿ ವಿಸ್ತರಣೆಗಾಗಿ ಕಡಲೂರು ಜಿಲ್ಲೆಯ ನೇವೇಲಿಯಲ್ಲಿರುವ ಎನ್‌ಎಲ್‌ಸಿ ಕಂಪನಿಯು ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿದೆ. ಇದನ್ನು ಪ್ರತಿಭಟಿಸಿ ಇಂದು (ಜುಲೈ 28) ಪಾಟ್ಟಾಲಿ ಮಕ್ಕಳ್ ಕಚ್ಚಿ ಪಕ್ಷದ ನಾಯಕ ಅನ್ಬುಮಣಿ ರಾಮದಾಸ್ ನೇತೃತ್ವದಲ್ಲಿ ಎನ್‌ಎಲ್‌ಸಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು. ಬಮಕವಿನಾರ್ ಮತ್ತು ನೇವೇಲಿ ಸುತ್ತಮುತ್ತಲಿನ ಹಲವು ಗ್ರಾಮಗಳ ಸಾವಿರಾರು ರೈತರು ಇದರಲ್ಲಿ ಭಾಗವಹಿಸಿದ್ದರು.
ಎನ್‌ಎಲ್‌ಸಿಯ ಮುಖ್ಯದ್ವಾರದ ಮುಂದೆ ಪಾಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಕಾರ್ಯಕರ್ತರು ಮತ್ತು ರೈತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ, ಪಿಎಂಕೆ ನಾಯಕ ಅನ್ಬುಮಣಿ ರಾಮದಾಸ್ ಅವರನ್ನು ಬಂಧಿಸಲಾಗಿತ್ತು. ಅನ್ಬುಮಣಿ ಬಂಧನವನ್ನು ಪ್ರತಿಭಟಿಸಿ ಪಿಎಂಕೆ ಕಾರ್ಯಕರ್ತರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಪೊಲೀಸರ ಪ್ರಕಾರ, ಇನ್ಸ್‌ಪೆಕ್ಟರ್ ಸೇರಿದಂತೆ 21 ಪೊಲೀಸರು ಗಾಯಗೊಂಡಿದ್ದಾರೆ.
ಪ್ರತಿಭಟನೆಯಲ್ಲಿ ಹಿಂಸಾಚಾರ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ನೀರು ಎರಚಿ ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸಿದರು. ಅಲ್ಲದೇ, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ಹಿಂಸಾಚಾರದಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರ ಬಂಧನದ ನಂತರ ವ್ಯಾನ್‌ನಲ್ಲಿದ್ದಾಗ ಸುದ್ದಿಗಾರರನ್ನು ಭೇಟಿ ಮಾಡಿದ ಪಿಎಂಕೆ ನಾಯಕ ಅನ್ಬುಮಣಿ, "ನೇವೇಲಿ ಎನ್‌ಎಲ್‌ಸಿ ಸಮಸ್ಯೆ ಎಲ್ಲರ ಸಮಸ್ಯೆ, ಭೂಮಿ ಮತ್ತು ಜನರನ್ನು ನಾಶಪಡಿಸಬೇಡಿ. ಎನ್‌ಎಲ್‌ಸಿ ವಿಚಾರದಲ್ಲಿ ಶ್ರಮಜೀವಿಗಳ ಪರ ನಮ್ಮ ಪಕ್ಷ ಪ್ರತಿಭಟನೆ ಮುಂದುವರೆಸಲಿದೆ. ಕೃಷಿ ಭೂಮಿಯನ್ನು ಎನ್‌ಎಲ್‌ಸಿ ಸ್ವಾಧೀನಪಡಿಸಿಕೊಳ್ಳಬಾರದು. ತಮಿಳುನಾಡು ವಿದ್ಯುತ್ ಸಮೃದ್ಧ ರಾಜ್ಯವಾಗಿದೆ. ಇಲ್ಲಿಗೆ ಎನ್‌ಎಲ್‌ಸಿ ಬೇಕಾಗಿಲ್ಲ. ಕಡಲೂರು ಜಿಲ್ಲೆಯನ್ನು ಎನ್‌ಎಲ್‌ಸಿ ಆಡಳಿತ ಸಂಪೂರ್ಣ ನಾಶ ಮಾಡುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
ಎನ್‌ಎಲ್‌ಸಿ ವಿರುದ್ಧ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಹಿಂಸಾಚಾರ ಭುಗಿಲೆದ್ದ ಕಾರಣ, ನೇವೇಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂಗಡಿಗಳನ್ನು ಮುಚ್ಚಲಾಗಿದ್ದು, ಭಾರೀ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.
ಅನ್ಬುಮಣಿ ರಾಮದಾಸ್ ಬಿಡುಗಡೆ: ನೇವೇಲಿ ಎನ್‌ಎಲ್‌ಸಿ ಆಡಳಿತದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಬಂಧನಕ್ಕೊಳಗಾಗಿದ್ದ ಪಿಎಂಕೆ ನಾಯಕ ಅನ್ಬುಮಣಿ ರಾಮದಾಸ್ ಅವರನ್ನು ಬಿಡುಗಡೆ ಮಾಡಲಾಗಿದೆ. ಗಲಭೆಯಲ್ಲಿ 21 ಪೊಲೀಸರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಓದಿ: ಉಡುಪಿ ವಿಡಿಯೋ ವಿವಾದ: ಬಿಜೆಪಿ ಪ್ರತಿಭಟನೆ.. ಸಿಐಡಿ ತನಿಖೆಗೆ ಶ್ರೀನಿವಾಸ ಪೂಜಾರಿ ಆಗ್ರಹ
ಏನಿದು ಪ್ರಕರಣ: ಕಡಲೂರು ಜಿಲ್ಲೆ, ನೆಯ್ವೇಲಿ ಎನ್‌ಎಲ್‌ಸಿ 2ನೇ ಗಣಿ ವಿಸ್ತರಣೆ ಕಾಮಗಾರಿಗೆ ಜು.26ರ ಬೆಳಗ್ಗೆ ಎನ್‌ಎಲ್‌ಸಿಯು ಅರಂಗಮಾದೇವಿ ಪ್ರದೇಶದಲ್ಲಿ ಕಾಲುವೆ ಕಡಿಯುವ ಕಾರ್ಯ ಆರಂಭಿಸಿದೆ. ಈ ವೇಳೆ ಕಟಾವಿಗೆ ಸಿದ್ಧವಾಗಿರುವ ಗದ್ದೆಗಳ ನಡುವೆ ಬೊಕ್ಲೈನ್ ಯಂತ್ರಗಳನ್ನು ಹಾಕಲಾಗಿತ್ತು. ರೈತರ ವಿರೋಧದ ನಡುವೆಯೂ ಕಾಮಗಾರಿ ಮುಂದುವರಿದಿದೆ. ಈ ವಿಚಾರ ತಮಿಳುನಾಡಿನ ರೈತರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು.
ಇದೇ ವೇಳೆ ಎನ್ ಎಲ್ ಸಿ ವಿಸ್ತರಣೆಗೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿರುವ ಪಿಎಂಕೆ ಪಕ್ಷದ ವತಿಯಿಂದ ಇಂದು ಎನ್‌ಎಲ್‌ಸಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು. ಪಕ್ಷದ ಅಧ್ಯಕ್ಷ ಅನ್ಬುಮಣಿ ರಾಮದಾಸ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಕಾರ್ಯಕರ್ತರು ಹಾಗೂ ಸುತ್ತಮುತ್ತಲಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
21 ಪೊಲೀಸರಿಗೆ ಗಾಯ: ಹಿಂಸಾಚಾರದಲ್ಲಿ ಇಬ್ಬರು ಮಹಿಳಾ ಕಾನ್ಸ್ಟೇಬಲ್ ಸೇರಿದಂತೆ ಕಾನ್‌ಸ್ಟೆಬಲ್‌ಗಳು ಮತ್ತು ಎನ್‌ಎಲ್‌ಸಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿರುವ ಛಾಯಾಗ್ರಾಹಕ ಸೇರಿದಂತೆ 22 ಜನರು ಗಾಯಗೊಂಡಿದ್ದಾರೆ. ಅವರು ಎನ್‌ಎಲ್‌ಸಿ ಒಡೆತನದ ವೈದ್ಯಕೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮಿಳುನಾಡು ಡಿಜಿಪಿ ಶಂಕರ್ ಜಿವಾಲ್ ಖುದ್ದು ಭೇಟಿ ನೀಡಿ ಹಣ್ಣು ಹಂಪಲು ನೀಡಿ ಸಾಂತ್ವನ ಹೇಳಿದರು. ಈ ವೇಳೆ ಕಡಲೂರು, ವಿಲ್ಲುಪುರಂ, ಕಲ್ಲಕುರಿಚಿ ಜಿಲ್ಲಾ ಎಸ್ಪಿಗಳು ಹಾಗೂ ಕಡಲೂರು ಜಿಲ್ಲಾಧಿಕಾರಿ ಉಪಸ್ಥಿತರಿದ್ದರು.
ಪೊಲೀಸರು ಅನ್ಬುಮಣಿ ರಾಮದಾಸ್ರನ್ನು ಬಂಧಿಸಿ ಖಾಸಗಿ ಮದುವೆ ಮಂಟಪದಲ್ಲಿ ಇರಿಸಿದ್ದರು. ಬಳಿಕ ಅವರನ್ನು ಸಂಜೆ 6 ಗಂಟೆಗೆ ಬಿಡುಗಡೆ ಮಾಡಲಾಯಿತು. ಅನ್ಬುಮಣಿ ರಾಮದಾಸ್ ಬಂಧನ ಖಂಡಿಸಿ ಕಾರ್ಯಕರ್ತರ ವತಿಯಿಂದ ಸೇಲಂ, ಧರ್ಮಪುರಿ, ತಿರುಪತ್ತೂರು, ತಿಂಡಿವನಂ, ಚೆನ್ನೈನಲ್ಲಿ ಪ್ರತಿಭಟನೆಗಳು ನಡೆದಿದ್ದವು ಎಂಬುದು ಗಮನಾರ್ಹ.