ಹೈದರಾಬಾದ್: ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಹೈದರಾಬಾದ್‌ನ ಹಳೆ ನಗರದ ಕೆಲವೆಡೆ ದಾಳಿ ಮಾಡಿದ್ದು, ಶೋಧ ನಡೆಸಿದೆ. ಇತ್ತೀಚೆಗೆ ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಕನ್ಹಯ್ಯ ಲಾಲ್ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಭಾಗವಾಗಿ ತನಿಖಾ ತಂಡವು ಹೈದರಾಬಾದ್‌ಗೆ ಬಂದಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.
ಉದಯಪುರದ ಕನ್ಹಯ್ಯಲಾಲ್ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಯ ಬಳಿ, ಹೈದರಾಬಾದ್‌ನಲ್ಲಿ ನೆಲೆಸಿರುವ ಮೊಹಮ್ಮದ್ ಮುನಾವರ್ ಹುಸೇನ್ ಎಂಬ ಬಿಹಾರಿ ವ್ಯಕ್ತಿಯ ದೂರವಾಣಿ ಸಂಖ್ಯೆ ಸಿಕ್ಕಿದೆ. ಪೊಲೀಸರು ಆತನ ವಿಳಾಸವನ್ನು ಈಗ ಪತ್ತೆ ಮಾಡಿದ್ದಾರೆ. ಈ ಬಿಹಾರಿ ವ್ಯಕ್ತಿಯು ಸದ್ಯ ನಗರದ ಸಂತೋಷ್ ನಗರದ ಹೋಟೆಲ್‌ವೊಂದರಲ್ಲಿ ಪತ್ತೆಯಾಗಿದ್ದು, ಆತನನ್ನು ಬಂಧಿಸಲಾಗಿದೆ. ಬಳಿಕ ಮಾದಾಪುರದ ಎನ್‌ಐಎ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ.
ಕೊಲೆ ಆರೋಪಿಯೊಂದಿಗೆ ಬಿಹಾರಿ ವ್ಯಕ್ತಿಯ ಸಂಬಂಧ ಎಂಥದ್ದು ಎಂಬ ಬಗ್ಗೆ ಬಗ್ಗೆ ಎನ್ಐಎ ಅಧಿಕಾರಿಗಳು ತೀವ್ರ ತನಿಖೆ ಆರಂಭಿಸಿದ್ದಾರೆ.