ನಂದ್ಯಾಲ (ಆಂಧ್ರಪ್ರದೇಶ): ಮದುವೆಯಾದ ಕೆಲವೇ ಗಂಟೆಗಳಲ್ಲಿ ನವವಿವಾಹಿತನೋರ್ವ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ನಡೆದಿದೆ. ಶಿವಕುಮಾರ್ ಎಂಬಾತನೇ ಮೃತ ನವಿವಾಹಿತನಾಗಿದ್ದಾನೆ.
ಜಿಲ್ಲೆಯ ವೇಲುಗೋಡು ವಲಯದ ಬೋಯರೇವುಳ ಗ್ರಾಮದ ನಿವಾಸಿಯಾದ ಶಿವಕುಮಾರ್ ಶುಕ್ರವಾರ ಜೂಪಾಡುಬಂಗ್ಲಾ ವಲಯದ ಭಾಸ್ಕರಪುರ ಗ್ರಾಮದ ಯುವತಿಯನ್ನು ವಿವಾಹವಾಗಿದ್ದರು. ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ವಾಕಿಂಗ್ಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದರು. ಆದರೆ, ಸುಮಾರು ಸಮಯವಾದರೂ ಮನೆಗೆ ಮರಳಿ ಬಂದಿಲ್ಲ. ಹೀಗಾಗಿ ಕುಟುಂಬಸ್ಥರು ಶಿವಕುಮಾರ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಬೋಯರೇವುಳ ಮತ್ತು ಮೋತ್ಕೂರು ಗ್ರಾಮಗಳ ನಡುವಿನ ರಸ್ತೆಯಲ್ಲಿ ಶಿವಕುಮಾರ್ ಬಿದ್ದಿರುವುದು ಗೊತ್ತಾಗಿದೆ. ಆಗ ಕೂಡಲೇ ಅವರನ್ನು ಆತ್ಮಕೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಅಷ್ಟರಲ್ಲಾಗಲೇ ಶಿವಕುಮಾರ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಈ ಕುರಿತು ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಅಪರಿಚಿತ ವಾಹನವೇನಾದರೂ ಡಿಕ್ಕಿಯಾಗಿದೆಯೇ? ಅಥವಾ ಯಾರಾದರೂ ಕೊಲೆ ಮಾಡಿದ್ದಾರಾ ಎಂಬ ನಿಟ್ಟಿನಲ್ಲೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮದುವೆಯಾದ ಕೆಲವೇ ಗಂಟೆಗಳಲ್ಲಿ ಈ ಸಾವು ಸಂಭವಿಸಿದ್ದರಿಂದ ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.
ಇದನ್ನೂ ಓದಿ: ಬೆಳಗಾವಿ: ಭೀಕರ ರಸ್ತೆ ಅಪಘಾತದಲ್ಲಿ 7 ಜನರ ದುರ್ಮರಣ