ನವದೆಹಲಿ: ಗುರುವಾರ ಸಂಜೆ 'ಕರ್ತವ್ಯ ಪಥ'ವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಕಾರ್ಮಿಕರಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ. ದೇಶದಲ್ಲಿ ಶ್ರಮ ಮತ್ತು ಶ್ರಮಿಕನಿಗೆ ಮನ್ನಣೆ ಸಲ್ಲಿಸುವ ಕ್ರಮವಿದೆ ಎಂದ ಅವರು ಹೊಸ ಸಂಸತ್ ಭವನ ಕಟ್ಟಡದ ನಿರ್ಮಾಣಕ್ಕಾಗಿ ದುಡಿದ ಕಾರ್ಮಿಕರಿಗಾಗಿ ವಿಶೇಷ ಗ್ಯಾಲರಿ ಮಾಡಲಾಗುವುದು ಎಂದರು.
ಕರ್ತವ್ಯ ಪಥ ಕಾಮಗಾರಿಯಲ್ಲಿ ಭಾಗವಹಿಸಿದ 16 ಕಾರ್ಮಿಕರ ಗುಂಪನ್ನು ಭೇಟಿ ಮಾಡಿದ ಪ್ರಧಾನಿ, 2023ರ ಗಣರಾಜ್ಯೋತ್ಸವದ ಪರೇಡ್ ಕಾರ್ಯಕ್ರಮಕ್ಕೆ ಕಾರ್ಮಿಕರ ಕುಟುಂಬವನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಿದ್ದಾರೆ. ಇದೇ ಸಂದರ್ಭದಲ್ಲಿ ಕಾರ್ಮಿಕರಿಗೆ ಕೃತಜ್ಞತೆ ವ್ಯಕ್ತಪಡಿಸಿದ ಮೋದಿ, ಕರ್ತವ್ಯ ಪಥ ಪುನರಾಭಿವೃದ್ಧಿಗೆ ಶ್ರಮ ಮತ್ತು ಉಸಿರಿನ ಧಾರೆಯೆರೆದು ಕೆಲಸ ಮಾಡಿದ್ದೀರಿ ಎಂದು ಶ್ಲಾಘಿಸಿದರು.
ಕಾಶಿ ವಿಶ್ವನಾಥ ಧಾಮ, ಐಎನ್‌ಎಸ್ ವಿಕ್ರಾಂತ್ ಮತ್ತು ಪ್ರಯಾಗ್‌ರಾಜ್ ಕುಂಭದಲ್ಲಿ ಕಾರ್ಮಿಕರೊಂದಿಗೆ ನಡೆಸಿದ ಸಂವಾದವನ್ನು ನೆನೆದು, ಶ್ರಮಯೇವ ಜಯತೇ ರಾಷ್ಟ್ರದ ಮಂತ್ರವಾಗಿದೆ. ನಮ್ಮ ದೇಶದಲ್ಲಿ ಶ್ರಮ ಮತ್ತು ಶ್ರಮಿಕನಿಗೆ ವಿಶೇಷ ಗೌರವ ಸಲ್ಲಿಸುವ ಸಂಪ್ರದಾಯವಿದೆ ಎಂದು ಹೇಳಿದರು.
ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್, ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ತಾ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ಬೃಹತ್ ಸಂಸತ್ ಕಟ್ಟಡ ನಿರ್ಮಿಸುತ್ತಿದೆ. ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಹೊಸ ಕಟ್ಟಡದಲ್ಲಿಯೇ ನಡೆಸಲು ಕೇಂದ್ರ ಸರ್ಕಾರ ಯೋಜಿಸಿದೆ. 2020ರ ಡಿಸೆಂಬರ್ನಲ್ಲಿ ಸೆಂಟ್ರಲ್ ವಿಸ್ತಾದ ಶಂಕುಸ್ಥಾಪನೆ ನೆರವೇರಿತ್ತು. ಜುಲೈನಲ್ಲಿ ಹೊಸ ಸಂಸತ್ ಭವನದ ಮೇಲೆ 6.5 ಮೀಟರ್ ಎತ್ತರದ ಲಾಂಛನ ಪ್ರಧಾನಿ ಅನಾವರಣಗೊಳಿಸಿದ್ದರು.
ಇದನ್ನೂ ಓದಿ : ಅಖಂಡ ಭಾರತ ಮೊದಲ ಪ್ರಧಾನಿ ನೇತಾಜಿ: ಪ್ರಧಾನಿ ಮೋದಿ