ನವದೆಹಲಿ: ದೆಹಲಿ ಹೈಕೋರ್ಟ್‌ನಲ್ಲಿ ವಾಟ್ಸ್‌ಆ್ಯಪ್‌ನ ಹೊಸ ಗೌಪ್ಯತೆ ನೀತಿ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಇಂದು ವಿಚಾರಣೆ ನಡೆಸಲಿದೆ. ಈ ಪ್ರಕರಣವನ್ನು ಈ ಹಿಂದೆ ಜನವರಿ 15 ರಂದು ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು. ಆದರೆ, ನ್ಯಾಯಮೂರ್ತಿ ಪ್ರತಿಭಾ.ಎಂ ಸಿಂಗ್ ಅವರು ಮನವಿಯನ್ನು ಆಲಿಸದಂತೆ ದೂರ ಸರಿದರು.
ಅರ್ಜಿಯಲ್ಲಿ "ವಾಟ್ಸ್ಆ್ಯಪ್ ಮತ್ತು ಫೇಸ್‌ಬುಕ್‌ನಂತಹ ಪ್ಲಾಟ್‌ಫಾರ್ಮ್‌ಗಳು ಈಗಾಗಲೇ ಬಳಕೆದಾರರ ಡೇಟಾವನ್ನು ಮೂರನೇ ವ್ಯಕ್ತಿಯೊಂದಿಗೆ ಅನಧಿಕೃತ ರೀತಿಯಲ್ಲಿ ಹಂಚಿಕೊಳ್ಳುತ್ತಿವೆ. ಸರ್ಕಾರದಿಂದ ಅನುಮತಿ ಪಡೆಯದೇ ವಾಟ್ಸ್‌ಆ್ಯಪ್‌ನ ಹೊಸ ಗೌಪ್ಯತೆ ನೀತಿಯನ್ನು ರೂಪಿಸಲಾಗಿದೆ" ಎಂದು ಆರೋಪಿಸಲಾಗಿದೆ.
ವಾಟ್ಸ್ಆ್ಯಪ್ ಹೊಸ ಗೌಪ್ಯತೆ ನೀತಿಯು ಸರ್ಕಾರದ ಯಾವುದೇ ಮೇಲ್ವಿಚಾರಣೆಯಿಲ್ಲದೇ ಬಳಕೆದಾರರ ಆನ್‌ಲೈನ್ ಚಟುವಟಿಕೆಯಲ್ಲಿ ಪೂರ್ಣ ಪ್ರವೇಶವನ್ನು ಪಡೆದಿದೆ. ಹೊಸ ನೀತಿಯಡಿಯಲ್ಲಿ, ಬಳಕೆದಾರರು ತಮ್ಮ ಡೇಟಾವನ್ನು ಫೇಸ್‌ಬುಕ್ ಒಡೆತನದ ಅಥವಾ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳೊಂದಿಗೆ ಹಂಚಿಕೊಳ್ಳದಿರಲು ಆಯ್ಕೆಗಳಿಲ್ಲ. ಈ ಹಿನ್ನೆಲೆಯಲ್ಲಿ ವಾಟ್ಸ್ಆ್ಯಪ್ ಹೊಸ ಗೌಪ್ಯತೆ ನೀತಿಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ವಾಟ್ಸ್‌ಆ್ಯಪ್‌ನ ಗೌಪ್ಯತೆ ನೀತಿಯನ್ನು ಮೂಲ ಹಕ್ಕುಗಳಿಗೆ ಅನುಗುಣವಾಗಿ ಸರಿಪಡಿಸಲು ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು. ಕೇಂದ್ರ ಸರ್ಕಾರ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79 (2) (ಸಿ) ಮತ್ತು ಸೆಕ್ಷನ್ 87 (2) (ಝಡ್ಜಿ) ಅಡಿಯಲ್ಲಿ ನೀಡಲಾಗಿರುವ ಹಕ್ಕುಗಳನ್ನು ಚಲಾಯಿಸುವಾಗ, ವಾಟ್ಸ್ಆ್ಯಪ್ ಬಳಕೆದಾರರ ಡೇಟಾವನ್ನು ಯಾವುದೇ ಮೂರನೇ ವ್ಯಕ್ತಿಗೆ ಹಂಚಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಕೋರಿದೆ.