ಪಾಟ್ನಾ (ಬಿಹಾರ): ಬಿಹಾರದಲ್ಲಿ ಕೋವಿಡ್ ಸೋಂಕಿನ ಹೊಸ ತಳಿ ಬಿಎ.12ರ ಪ್ರಕರಣ ಪತ್ತೆಯಾಗಿದ್ದು, ಇದು ಒಮಿಕ್ರಾನ್ಗಿಂತ 10 ಪಟ್ಟು ಹೆಚ್ಚು ವೇಗವಾಗಿ ಹರಡುವ ಸಾಂಕ್ರಾಮಿಕ ರೋಗವಾಗಿದೆ. ಪಾಟ್ನಾದ ಇಂದಿರಾ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸುಮಾರು ಎರಡು ತಿಂಗಳಿಂದ ನಡೆಯುತ್ತಿರುವ ಒಮಿಕ್ರಾನ್ ರೂಪಾಂತರದ 13 ಮಾದರಿಗಳ ಜೀನೋಮ್ ಪರೀಕ್ಷೆಯ ವೇಳೆ ಈ ರೂಪಾಂತರಿ ಸೋಂಕು ಪತ್ತೆಯಾಗಿದೆ.
ಸಂಭವನೀಯ ಹೊಸ ರೂಪಾಂತರಗಳ ಮೇಲೆ ಪತ್ತೆ ಹಚ್ಚಲು ಜೀನೋಮ್ ಪರೀಕ್ಷೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಎಕ್ಸ್ಇ ರೂಪಾಂತರಿ ಸೋಂಕು ಮತ್ತು ಬಿಎ.12 ರೂಪಾಂತರಿ ಸೋಂಕಿನ ಪರಿಣಾಮದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದರೆ, ಈಗಾಗಲೇ ಪ್ರಪಂಚದ ಅನೇಕ ಸ್ಥಳಗಳಲ್ಲಿ ಬಿಎ.12 ಪತ್ತೆಯಾಗಿದೆ. ಅಮೆರಿಕದಲ್ಲಿ ಈ ತಳಿ ಮೊದಲು ಕಾಣಿಸಿಕೊಂಡಿದ್ದು, ಇದು ಬಿಎ.1 ಮತ್ತು ಬಿಎ.2ಗಿಂತ ಬಿಎ.12 ತಳಿ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥೆ ಡಾ.ನಮ್ರತಾ ಕುಮಾರಿ ಹೇಳಿದ್ದಾರೆ.
ಎ.1, ಬಿಎ.2 ಹಾಗೂ ಬಿಎ.12 ಸೋಂಕುಗಳು ಒಮಿಕ್ರಾನ್ನ ಹೊಸ ತಳಿಗಳು ಆಗಿವೆ. ದೆಹಲಿಯಲ್ಲಿ ಬಿಎ.12ರ ಕೆಲ ಪ್ರಕರಣಗಳು ಪತ್ತೆಯಾಗಿದ್ದರೂ ಈವರೆಗೆ ಅದರ ಬಗ್ಗೆ ವಿವರವಾದ ಅಧ್ಯಯನ ನಡೆದಿಲ್ಲ. ಈ ಹೊಸ ರೂಪಾಂತರದ ಪರಿಣಾಮ ಹೆಚ್ಚಿರಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅನಗತ್ಯ ಭಯಪಡುವ ಅಗತ್ಯವಿಲ್ಲ. ಆದರೂ, ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕೆಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಗ್ರಾಹಕನಿಗೆ ಬಂತು 1,41,770 ರೂಪಾಯಿ ಬಿಲ್: ಏರ್ಟೆಲ್ಗೆ ಗ್ರಾಹಕ ನ್ಯಾಯಾಲಯದಿಂದ ದಂಡ!