ಮುಂಬೈ: ನಾರ್ಕೋಟಿಕ್ಸ್ ನಿಯಂತ್ರಣ ಬ್ಯೂರೋ ಮುಂಬೈ ಮತ್ತು ಗುಜರಾತ್ ಘಟಕಗಳು ಜಂಟಿ ಕಾರ್ಯಚರಣೆ ನಡೆಸಿ, ಡ್ರಗ್ಸ್ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿ 6 ಜನರನ್ನ ಬಂಧಿಸಿ 60ಕೆಜಿ ಎಂಡಿಎಮ್ಎ ಡ್ರಗ್ಸ್ ವಶಪಡಿಸಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಘಟನೆಯಲ್ಲಿ ಗುಜರಾತ್ ಮೂಲದ ನಾಲ್ಕು ಜನರನ್ನ ಬಂಧಿಸಿ 10ಕೆಜಿ ಡ್ರಗ್ಸ್ ವಶಪಡಿಸಿಕೊಂಡರೆ, ಮುಂಬೈ ಮೂಲದ ಇಬ್ಬರನ್ನ ಬಂಧಿಸಿ 50ಕೆಜಿಯ ಡ್ರಗ್ಸ್ ಪಶಕ್ಕೆ ಪಡೆಯಲಾಗಿದೆ. ಇವುಗಳ ಒಟ್ಟು ಮೌಲ್ಯ 120 ಕೋಟಿಯದ್ದಾಗಿದೆ. ಇನ್ನು ಬಂಧಿತರಲ್ಲಿ ಸೋಹೈಲ್ ಮಹರ್ ಗಫಿತಾ ಎಂಬ ಆರೋಪಿ ಅಮೆರಿಕಾದಲ್ಲಿ ಪೈಲಟ್ ತರಬೇತಿ ಪಡೆದು, ಏರ್ ಇಂಡಿಯಾದಲ್ಲಿ ಪೈಲಟ್ ಆಗಿ ಕಾರ್ಯನಿರ್ವಹಿಸಿದ್ದ.
ಆದರೇ ವೈದ್ಯಕೀಯ ಕಾರಣಗಳಿಂದ ಅವನನ್ನ ಪೈಲಟ್ ಕೆಲಸದಿಂದ ತೆಗೆಯಲಾಯಿತು. ಬಳಿಕ ಡ್ರಗ್ಸ್ ದಂಧೆಯಲ್ಲಿ ತೊಡಗಿದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಇದೇ ಪ್ರಕರಣದಲ್ಲಿ ಸಿಗಿಬಿದ್ದಿದ್ದ ಗ್ಯಾಂಗ್ಗೂ ಮತ್ತು ಇವರಿಗೂ ನಂಟು ಇರುವ ಬಗ್ಗೆ ಶಂಕಿಸಲಾಗಿದ್ದು, ಈ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತ ಗ್ಯಾಂಗ್ ಇಲ್ಲಿಯವರೆಗೂ ಒಟ್ಟು 225 ಕೆಜಿಯ ಎಂಡಿ ಡ್ರಗ್ಸ್ನ್ನು ಮಾರಾಟ ಮಾಡಿದ್ದಾರೆ ಎಂದು ಪ್ರಥಮ ಹಂತದ ತನಿಖೆಯಲ್ಲಿ ತಿಳಿದು ಬಂದಿದೆ. ಬಂಧಿತರ ಜಾಲಾ ದೊಡ್ಡದಾಗಿದ್ದು ಇತರ ರಾಜ್ಯಗಳಿಗೂ ಇವರ ಗ್ಯಾಂಗ್ ಹರಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಮತ್ತಷ್ಟು ಜನರನ್ನ ಬಂಧಿಸಲಾಗುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮುಂಬೈ: ₹1,400 ಕೋಟಿ ಮೌಲ್ಯದ ಮೆಫೆಡ್ರೊನ್ ಡ್ರಗ್ಸ್ ವಶ, ಐವರ ಬಂಧನ