ದಂತೇವಾಡ (ಛತ್ತೀಸ್ಗಢ): ಸುಮಾರು 30 ಪ್ರಯಾಣಿಕರಿದ್ದ ರೈಲನ್ನು ಛತ್ತೀಸ್ಗಢದ ದಂತೇವಾಡದಲ್ಲಿ ನಕ್ಸಲರು ನಿಲ್ಲಿಸಿದ್ದು, ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ.
ದಂತೇವಾಡದ ಭನ್ಸಿ-ಬಚೇಲಿ ಬಳಿ ಅರಣ್ಯ ಪ್ರದೇಶದೊಳಗಿನ ಮಾರ್ಗದಲ್ಲಿ ನಕ್ಸಲರು 45 ನಿಮಿಷಗಳ ಕಾಲ ರೈಲು ನಿಲ್ಲಿಸಿದ್ದಾರೆ. ಏಪ್ರಿಲ್ 26ರಂದು ಭಾರತ್ ಬಂದ್‌ಗೆ ಸಹಾಯ ಮಾಡುವಂತೆ ಪ್ರಯಾಣಿಕರಿಗೆ ಹೇಳಿ, ರೈಲಿನೊಳಗೆ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಈ ವೇಳೆ ನಕ್ಸಲರು ಯಾವುದೇ ಪ್ರಯಾಣಿಕರಿಗೆ ಹಾನಿ ಮಾಡಲಿಲ್ಲ ಎಂದು ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ಬಂದ ಜಿಲ್ಲಾ ರಿಸರ್ವ್ ಗಾರ್ಡ್ ಸಿಬ್ಬಂದಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ.
ಏಪ್ರಿಲ್ 4ರಂದು ಛತ್ತೀಸ್ಗಢದ ಸುಕ್ಮಾ - ಬಿಜಾಪುರದಲ್ಲಿ ನಕ್ಸಲರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ನಡೆದ ಗುಂಡಿನ ಕಾಳಗದಲ್ಲಿ 22 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು.