ಆಂಧ್ರಪ್ರದೇಶ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಶೋಧಕಾರ್ಯ ವೇಗಗೊಳಿಸಿದ್ದು, ಇಂದು ಬೆಳಗ್ಗೆ ಎನ್.ಐ.ಎ ಅಧಿಕಾರಿಗಳು ನೆಲ್ಲೂರು ಜಿಲ್ಲೆಯ ಬುಚ್ಚಿರೆಡ್ಡಿಪಾಳ್ಯ ಖಾಜಾ ನಗರದಲ್ಲಿ ಇಲಿಯಾಸ್ ಹಾಗೂ ಆತನ ಸ್ನೇಹಿತರ ಮನೆಗಳಲ್ಲಿ ಶೋಧಕಾರ್ಯ ಕೈಗೊಂಡಿದ್ದಾರೆ. ಶೋಧಕಾರ್ಯಕ್ಕೆಂದು ಬಂದ ಅಧಿಕಾರಿಗಳನ್ನು ಇಲಿಯಾಸ್ ಸಂಬಂಧಿಕರು ಹಾಗೂ ಸಹೋದ್ಯೋಗಿಗಳು ಮುಂದೆ ಹೋಗಲು ಬಿಡದೆ ಬಹಳ ಹೊತ್ತು ತಡೆದು ನಿಲ್ಲಿಸಿರುವ ಘಟನೆ ನಡೆದಿದೆ.
ಇದಲ್ಲದೆ ಅದಲ್ಲದೆ ನೀವು ಇಲ್ಲಿ ಶೋಧಕಾರ್ಯ ನಡೆಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಾರೆ. ಇದರಿಂದ ಅಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದೇಶದೆಲ್ಲೆಡೆ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತ ದೇಶದಲ್ಲಿ ಉಗ್ರರ ಬೇರುಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದೆ ಎಂಬ ಕಾರಣದಿಂದ ಅವುಗಳ ಮೇಲೆ ದೇಶಾದ್ಯಂತ ನಿಗಾ ಇಡಲಾಗುತ್ತಿದೆ. ಈ ಹಿನ್ನೆಲೆ ಎನ್.ಐ.ಎ ಅಧಿಕಾರಿಗಳು ಇಂದು ಹಲವೆಡೆ ಶೋಧಕಾರ್ಯ ಕೈಗೊಂಡಿದ್ದಾರೆ.
ಇಂದು ಮುಂಜಾನೆ ನಿಜಾಮಾಬಾದ್ ಜೊತೆಗೆ ನಿರ್ಮಲ್ ಜಿಲ್ಲೆ ಭೈಂಸಾ ಪಟ್ಟಣ ಹಾಗೂ ಜಗಿತ್ಯಾಲ ಪಟ್ಟಣದ ಸುಮಾರು 20 ಕಡೆಗಳಲ್ಲಿ ಶೋಧ ನಡೆಸಲಾಗಿದೆ. ಈ ಪ್ರಕರಣದಲ್ಲಿ ಬಂಧಿತರ ಜತೆಗೆ ಹಲವು ಶಂಕಿತರ ಮನೆಗಳಲ್ಲಿ ಎನ್‌ಐಎ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ದಾಳಿಯಲ್ಲಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ನಿರ್ಮಲ್ ಜಿಲ್ಲೆಯ ಭೈಂಸಾದಲ್ಲಿ ತನಿಖಾಧಿಕಾರಿಗಳು ಮದೀನಾ ಕಾಲೊನಿಯ ಹಲವು ಮನೆಗಳಲ್ಲಿ ತಪಾಸಣೆ ನಡೆಸಿದರು. ನಿಜಾಮಾಬಾದ್ನ ಶೋಧಕಾರ್ಯದಲ್ಲಿ ದೊರೆತ ಮಾಹಿತಿಯನ್ವಯ ಮದೀನಾ ಕಾಲೊನಿಯಲ್ಲೂ ಹುಡುಕಾಡಿದ್ದಾರೆ. ಭೈಂಸಾದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ತರಬೇತಿ ಕಾರ್ಯಕ್ರಮಗಳ ಬಗ್ಗೆ ಅಧಿಕಾರಿಗಳು ವಿಚಾರಿಸಿದ್ದಾರೆ.
ಜಗಿತ್ಯಾಲ ಪಟ್ಟಣದಲ್ಲಿಯೂ ದಾಳಿ ನಡೆಸಿರುವ ಎನ್‌ಐಎ ತಂಡ ಟವರ್ ಸರ್ಕಲ್‌ನಲ್ಲಿರುವ ಕೇರ್ ಮೆಡಿಕಲ್ ಶಾಪ್‌ಗೆ ಬಂದು ಅಂಗಡಿಯ ಬೀಗ ಒಡೆಯುತ್ತಿದ್ದಾಗ ಸ್ಥಳೀಯ ಮಹಿಳೆಯರು ತಡೆದಿದ್ದಾರೆ. ಅಧಿಕಾರಿಗಳು ಮಾಲೀಕರನ್ನು ಕರೆಸಿ ಪರಿಶೀಲನೆ ನಡೆಸಿದರು. ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದ್ದು, ಅವರ ಸಹಾಯದಿಂದ ಇನ್ನೂ ಕೆಲವು ಮನೆಗಳಲ್ಲಿ ಶೋಧ ನಡೆಸಲಾಯಿತು. ಶಂಕಿತರ ಮನೆಯಿಂದ ಹಲವು ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಎಸಿಬಿ ದಾಳಿ: ಆಪ್ ಶಾಸಕ ಅಮಾನತುಲ್ಲಾ ಖಾನ್ ಬೆಂಬಲಿಗರಿಂದ ಅಧಿಕಾರಿ ಮೇಲೆ ದೌರ್ಜನ್ಯ