ಪಾಣಿಪತ್(ಹರಿಯಾಣ): ಧ್ವನಿವರ್ಧಕದಿಂದ ಜೋರಾಗಿ ಆಜಾನ್ ಕೇಳಿ ಬರುತ್ತಿರುವುದರಿಂದ ತೊಂದರೆಯಾಗುತ್ತಿದೆ ಎಂದು ಮುಸ್ಲಿಂ ವಕೀಲ ಮೊಹಮ್ಮದ್ ಆಜಂ ಇದೀಗ ಎಸ್ಪಿ ಹಾಗೂ ಡಿಸಿಗೆ ದೂರು ನೀಡಿದ್ದಾರೆ. ರಾತ್ರಿ 10ರಿಂದ ಬೆಳಗ್ಗೆ 6ಗಂಟೆವರೆಗೆ ಧ್ವನಿವರ್ಧಕ ನಿಷೇಧಿಸುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ ಎಂದು ವಕೀಲರು ನೋಟಿಸ್ನಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಧ್ವನಿವರ್ಧಕದ ಮೂಲಕ ಆಜಾನ್ ನುಡಿಸದಂತೆ ಈಗಾಗಲೇ ದೊಡ್ಡ ಮಟ್ಟದ ಕೂಗು ಕೇಳಿ ಬಂದಿದೆ. ಇದರ ಬೆನ್ನಲ್ಲೇ ಹರಿಯಾಣದ ಪಾಣಿಪತ್ನ ಮುಸ್ಲಿಂ ವಕೀಲರೊಬ್ಬರು ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿ ಮಾಡಿದ್ದು, ಧ್ವನಿವರ್ಧಕದ ಮೂಲಕ ಆಜಾನ್ ನುಡಿಸುವುದನ್ನ ನಿಷೇಧ ಮಾಡುವಂತೆ ಸೂಚನೆ ನೀಡಿದ್ದಾರೆ. ತಡರಾತ್ರಿ ದೊಡ್ಡ ಧ್ವನಿಯಲ್ಲಿ ಧ್ವನಿವರ್ಧಕಗಳ ಮೂಲಕ ಆಜಾನ್ ನುಡಿಸಲಾಗ್ತಿದ್ದು, ಇದಕ್ಕೆ ಅನುಮತಿ ನೀಡದಂತೆ ಮನವಿ ಮಾಡಿದ್ದಾರೆ. ಒಂದು ವೇಳೆ ನಮ್ಮ ನೋಟಿಸ್ಗೆ ಮನ್ನಣೆ ಸಿಗದೇ ಹೋದರೆ, ಹೈಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
ಧ್ವನಿವರ್ಧಕಗಳ ಮೂಲಕ ಆಜಾನ್ ನುಡಿಸದಂತೆ ಈಗಾಗಲೇ ಹೈಕೋರ್ಟ್ ಸೂಚನೆ ನೀಡಿದ್ದು, ಅದರ ಜವಾಬ್ದಾರಿ ಜಿಲ್ಲೆಯ ಎಸ್ಪಿ ಹಾಗೂ ಡಿಸಿಗೆ ನೀಡಿದೆ. ಇದರ ಹೊರತಾಗಿ ಕೂಡ ಪಾಣಿಪತ್ನಲ್ಲಿ ಬೆಳಗಿನ ಜಾವ 3 ಗಂಟೆಗೆ ಧ್ವನಿವರ್ಧಕಗಳ ಮೂಲಕ ಆಜಾನ್ ನುಡಿಸಲಾಗ್ತಿದೆ ಎಂದು ದೂರಿರುವ ವಕೀಲರು, ಇದರಿಂದ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಮಕ್ಕಳಿಗೆ ತೊಂದರೆಯಾಗ್ತಿದೆ ಎಂದಿದ್ದಾರೆ. ತಾವು ದೂರು ನೀಡಿದ ಬಳಿಕ ಕೆಲವರು ಇಸ್ಲಾಂ ಧರ್ಮ ತೊರೆಯುವಂತೆ ಬೆದರಿಕೆ ಹಾಕಿದ್ದಾರೆ. ರಾಷ್ಟ್ರದ ಹಿತದೃಷ್ಟಿಯಿಂದ ನಾನು ಇಸ್ಲಾಂ ಧರ್ಮ ತ್ಯಜಿಸಲು ಸಹ ಸಿದ್ಧನಾಗಿದ್ದೇನೆ ಎಂದು ವಕೀಲ ಮೊಹಮ್ಮದ್ ಅಜಂ ತಿಳಿಸಿದ್ದಾರೆ.