ಮುಂಬೈ (ಮಹಾರಾಷ್ಟ್ರ): ಉದ್ಯಮಿ ಮುಕೇಶ್ ಅಂಬಾನಿ ನಿವಾಸ ಆ್ಯಂಟಿಲಿಯಾ ಬಳಿ ಸ್ಫೋಟಕ ಇರಿಸಿದ್ದ ಆರೋಪದಲ್ಲಿ ಅಮಾನತುಗೊಂಡು ಬಂಧಿತರಾಗಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಕಸ್ಟಡಿಯನ್ನು ನವೆಂಬರ್ 6ರವರೆಗೆ ವಿಸ್ತರಿಸಿ ಮುಂಬೈ Esplanade ಕೋರ್ಟ್ ಸೋಮವಾರ ಆದೇಶಿಸಿದೆ.
100 ಕೋಟಿ ರೂಪಾಯಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಕ್ರೈಂ ಬ್ರಾಂಚ್ ವಾಜೆ ಅವರನ್ನು 10 ದಿನಗಳ ಕಾಲ ಕಸ್ಟಡಿಗೆ ಕೋರಿತ್ತು. ಜುಲೈ 23 ರಂದು ಗೋರೆಗಾಂವ್ ಪೊಲೀಸ್ ಠಾಣೆಯಲ್ಲಿ ಸಚಿನ್ ವಾಜೆ, ಪರಂಬಿರ್ ಸಿಂಗ್ ಮತ್ತು ಇತರರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂಬೈ ಕ್ರೈಂ ಬ್ರ್ಯಾಂಚ್‌ಗೆ ಹಸ್ತಾಂತರಿಸಲಾಗಿತ್ತು.
ಮುಂಬೈನ ಮುಖೇಶ್ ಅಂಬಾನಿ ಅವರ ಮನೆಯ ಬಳಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಸ್ಫೋಟಕಗಳನ್ನು ವಶಪಡಿಸಿಕೊಂಡಿರುವ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಎನ್‌ಐಎ ಮಾರ್ಚ್‌ನಲ್ಲಿ ವಾಜೆಯನ್ನು ಬಂಧಿಸಿತ್ತು. ಫೆಬ್ರವರಿ 25 ರಂದು ಮುಂಬೈನಲ್ಲಿರುವ ಮುಖೇಶ್ ಅಂಬಾನಿ ಅವರ ಮನೆ ಆ್ಯಂಟಿಲಿಯಾ ಬಳಿ ಸ್ಫೋಟಕ ತುಂಬಿದ ವಾಹನವನ್ನು ಇರಿಸಿದ್ದ ಪ್ರಕರಣದಲ್ಲಿ ವಾಜೆ ಪ್ರಮುಖ ಆರೋಪಿಯಾಗಿದ್ದಾರೆ.
ಆ್ಯಂಟಿಲಿಯಾ ಹೊರಗೆ ಸ್ಫೋಟಕ ಸಾಮಗ್ರಿಗಳನ್ನು ಹೊಂದಿರುವ ವಾಹನದ ಮಾಲೀಕ ಮನ್ಸುಖ್ ಹಿರೇನ್ ಅವರ ಹತ್ಯೆಯ ಆರೋಪವೂ ವಾಜೆ ಮೇಲಿತ್ತು. ಹಿರೇನ್ ಮಾರ್ಚ್ 5 ರಂದು ಥಾಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಮೇ 2021 ರಲ್ಲಿ ವಾಜೆ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.
ಓದಿ: ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳಲು 3 ತಿಂಗಳ ಗೃಹಬಂಧನಕ್ಕೆ ವಾಜೆ ಮನವಿ: No ಎಂದ NIA ಕೋರ್ಟ್