ನವದೆಹಲಿ: ಕೇಂದ್ರದ ಕೃಷಿ ಕಾಯ್ದೆಗಳನ್ನ ವಿರೋಧಿಸಿ ರೈತ ಸಂಘಟನೆಗಳೊಡನೆ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಮಾತುಕತೆ ನಡೆಸಿದ್ದು, ಈ ಬಾರಿಯೂ ಒಮ್ಮತದ ನಿರ್ಧಾರಕ್ಕೆ ಬರಲು ವಿಫಲವಾಗಿದ್ದಾರೆ. ಇದರಿಂದಾಗಿ ಡಿಸೆಂಬರ್ 5ಕ್ಕೆ ಮುಂದಿನ ಹಂತದ ಮಾತುಕತೆ ನಿಗದಿಯಾಗಿದೆ.
ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದ ಸುಧಾರಣೆಗಾಗಿ ಹೊಸದಾಗಿ ಮೂರು ಕಾಯ್ದೆಗಳನ್ನು ಜಾರಿಗೆ ತಂದಿದ್ದು, ಈ ಕಾಯ್ದೆಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ರೈತ ಸಂಘಟನೆಗಳ ಮುಖಂಡರನ್ನು ಕೇಂದ್ರ ಸರ್ಕಾರ ಮಾತುಕತೆಗೆ ಆಹ್ವಾನಿಸಿದೆ.
ಈ ರೈತ ಮುಖಂಡರ ಜೊತೆಗೆ ಕೇಂದ್ರ ಸರ್ಕಾರದ ಪರವಾಗಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಾತುಕತೆ ನಡೆಸಿದ್ದಾರೆ. ಸರ್ಕಾರವು ತೆರೆದ ಮನಸ್ಸಿನಿಂದ ಮಾತುಕತೆ ನಡೆಸಿದೆ. ಹೊಸ ಕಾಯ್ದೆಗಳಿಂದ ಎಪಿಎಂಸಿಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತವೆ ಎಂಬ ಭೀತಿಯಲ್ಲಿ ರೈತರಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಇದರ ಜೊತೆಗೆ ಕಾಯ್ದೆಗಳಲ್ಲಿ ರೈತರ ಕುಂದುಕೊರತೆ ಬಗ್ಗೆ ಸ್ಥಳೀಯ ಕೋರ್ಟ್ಗಳಲ್ಲಿ ದೂರು ಸಲ್ಲಿಸಲು ಅವಕಾಶವಿದೆ. ರೈತರ ಆತಂಕ ಹೆಚ್ಚಿಸಿರುವ ಕನಿಷ್ಠ ಬೆಂಬಲ ಬೆಲೆಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ.ಈ ಬಗ್ಗೆ ಭರವಸೆ ನೀಡುತ್ತೇವೆ ಎಂದು ರೈತರಿಗೆ ಮನವರಿಕೆ ಮಾಡಿದರು.
ಹೊಸ ಕಾಯ್ದೆಯಲ್ಲಿ ರೈತರಿಗೆ ಮಾರಾಟ ಸ್ವಾತಂತ್ರ್ಯ ನೀಡಲಾಗಿದ್ದು, ಪ್ಯಾನ್ ಕಾರ್ಡ್ ಆಧಾರದ ಮೇಲೆ ಮಂಡಿಯ ಹೊರಗಡೆ ವಹಿವಾಟು ನಡೆಯುತ್ತದೆ. ವಹಿವಾಟು ನಡೆಸುವವರು ನೋಂದಾಯಿಸಿಕೊಂಡಿರಬೇಕಾಗುತ್ತದೆ. ಆ ಬಗ್ಗೆ ನಾವು ಖಚಿತಪಡಿಸಿಕೊಳ್ಳುತ್ತೇವೆ' ಎಂದು ನರೇಂದ್ರ ಭರವಸೆ ನೀಡಿದ್ದಾರೆ.
ರೈತರು ಗುರುವಾರ ಕೇಂದ್ರ ಸರ್ಕಾರಕ್ಕೆ ಡೆಡ್ಲೈನ್ ನೀಡಿದ್ದು, ಸರ್ಕಾರ ಸಮಸ್ಯೆಯನ್ನು ಪರಿಹರಿಸದಿದ್ದರೇ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಲಾಗಿತ್ತು. ಈಗ ಮಾತುಕತೆ ಮತ್ತೊಮ್ಮೆ ಮುಂದೂಡಿಕೆಯಾಗಿದೆ.