ಪಶ್ಚಿಮ ಬಂಗಾಳ: ಚಮ್ ಚಮ್, ಮಿದಿದಾನ, ರಸಗುಲ್ಲಾ... ಇವೆಲ್ಲಾ ಜನಪ್ರಿಯ ಬೆಂಗಾಳಿ ಸಿಹಿ ತಿನಿಸುಗಳ ಹೆಸರುಗಳು. ಈ ತಿನಿಸುಗಳ ಬಗ್ಗೆ ಗೊತ್ತಿರುವವರ ಬಾಯಲ್ಲಿ ಹೆಸರು ಕೇಳಿದಾಕ್ಷಣ ನೀರೂರದೆ ಇರದು. ಇಂದು ನಾವು ನಿಮಗೆ ಮತ್ತೊಂದು ಸ್ವಾದಿಷ್ಟ ಬೆಂಗಾಲಿ ಸಿಹಿತಿಂಡಿಯ ಬಗ್ಗೆ ಹೇಳಹೊರಟಿದ್ದೇವೆ. ಅದರ ಹೆಸರು ಬಾಬರ್ಷಾ.
ಪಶ್ಚಿಮ ಬಂಗಾಳದ ಖಿರ್ಪೈಗೆ ಹೋದವರು ಈ ಸಿಹಿ ಸವಿಯದೇ ಬರಲಾರರು. ತಿಂಡಿಪ್ರಿಯರ ನಾಲಿಗೆ ತಣಿಸುವ ರುಚಿ ಹೊಂದಿದೆ ಈ ಬಾಬರ್ಷಾ. ಸುಮಾರು 275 ವರ್ಷಗಳಷ್ಟು ಹಿಂದಿನಿಂದಲೇ ಖ್ಯಾತಿ ಪಡೆದಿರುವ ಬಾಬರ್ಷಾ ಪಶ್ಚಿಮ ಮೇದಿನಿಪುರ್ ಜಿಲ್ಲೆಯ ಖಿರ್ಪೈನಲ್ಲಿ ಮಾತ್ರ ಸಿಗುತ್ತದೆ. ಒಂದು ತುಂಡು ಬಾಬರ್ಷಾ ಬೆಲೆ 25 ರಿಂದ 30 ರೂಪಾಯಿ. ಒಮ್ಮೆ ನೀವು ಬಾಬರ್ಷಾ ಸವಿದರೆ ಅದರ ರುಚಿ ಎಂದಿಗೂ ನಿಮ್ಮನ್ನು ತನ್ನತ್ತ ಆಕರ್ಷಿಸುತ್ತದೆ. ಅನೇಕರು ಬಾಬರ್ಷಾ ಖರೀದಿ ಮಾಡಲೆಂದೇ ಖಿರ್ಪೈಗೆ ಭೇಟಿ ನೀಡುತ್ತಾರೆ.
ಸಿಹಿ ಅಂಗಡಿ ಮಾಲೀಕರು ಬಾಬರ್ಷಾಗಳನ್ನು ವಿಶೇಷ ಕಾಳಜಿಯಿಂದ ತಯಾರಿಸುತ್ತಾರೆ. ಬಾಬರ್ಷಾವನ್ನು ಡಾಲ್ಡಾ, ಮೈದಾ ಹಿಟ್ಟು, ಹಾಲು, ತುಪ್ಪ, ನೀರು, ಸಕ್ಕರೆ ಪಾಕ ಮತ್ತು ಜೇನುತುಪ್ಪದಿಂದ ಸಿದ್ಧಪಡಿಸುತ್ತಾರೆ. ಮೊದಲಿಗೆ, ಡಾಲ್ಡಾ ಮತ್ತು ಮೈದಾ ಹಿಟ್ಟನ್ನು ಬೆರೆಸಲಾಗುತ್ತದೆ. ನಂತರ ಅದಕ್ಕೆ ನೀರು ಮತ್ತು ಹಾಲು ಸೇರಿಸಲಾಗುತ್ತದೆ. ಈ ಮಿಶ್ರಣವನ್ನು ತಯಾರಿಸಿದ ನಂತರ ತುಂಡುಗಳಾಗಿ ಕತ್ತರಿಸಿ, ಅದನ್ನು ಕ್ರಮೇಣ ಕುದಿಯುವ ತುಪ್ಪದಲ್ಲಿ ಹಾಕಿ ಬೇಯಿಸುತ್ತಾರೆ. ಬಳಿಕ ಈ ತುಂಡುಗಳನ್ನು ಜೇನುತುಪ್ಪ ಅಥವಾ ಸಕ್ಕರೆ ಪಾಕದಲ್ಲಿ ಅದ್ದಿ ಬಡಿಸಲಾಗುತ್ತದೆ.
ಬಾಬರ್ಷಾ ತಯಾರಾದ ವಿಧಾನದ ಬಗ್ಗೆ ಹಲವಾರು ಕತೆಗಳಿವೆ. ಕೆಲವು ಇತಿಹಾಸಕಾರರು ಈ ಸಿಹಿತಿಂಡಿಗೆ ಎಡ್ವರ್ಡ್ ಬಾಬರ್ ಎಂಬ ಆಂಗ್ಲ ಅಧಿಕಾರಿಯ ಹೆಸರನ್ನು ಇಡಲಾಗಿದೆ ಎಂದು ಹೇಳುತ್ತಾರೆ. ಇನ್ನೂ ಕೆಲವರು ಮೊಘಲ್ ಚಕ್ರವರ್ತಿ ಬಾಬರ್ ಈ ಹೆಸರು ಬಂದಿದೆ ಎನ್ನುತ್ತಾರೆ.
ಈ ಸಿಹಿತಿಂಡಿಯನ್ನು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ಧಾರ್ಥ ಶಂಕರ್ ರಾಯ್ ಸಹ ಸವಿದಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಸ್ವಾದಿಷ್ಟ ಸಿಹಿಯ ತಯಾರಕರು ಹಾಗೂ ಮಾರಾಟಗಾರರು ಸರ್ಕಾರದ ಬೆಂಬಲವಿಲ್ಲದೇ ನಿರಂತರವಾಗಿ ಸಾಂಪ್ರದಾಯಿಕ ಬಾಬರ್ಷಾವನ್ನು ಮುಂದುವರಿಸಿದ್ದಾರೆ.