ಗೋಪಾಲ್‌ಗಂಜ್ (ಬಿಹಾರ): ತಾಯಿಯೇ ತನ್ನ ಮಕ್ಕಳನ್ನು ಕೊಳಕ್ಕೆ ಎಸೆದ ಪ್ರಕರಣದಲ್ಲಿ ನಾಲ್ವರು ಬಾಲಕಿಯರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ನಾಲ್ಕನೇ ಬಾಲಕಿಯನ್ನು ರಕ್ಷಿಸಲಾಗಿದ್ದು, ಉತ್ತರ ಪ್ರದೇಶದ ಪಡ್ರೌನಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೂಲಗಳ ಪ್ರಕಾರ, ಮಹಿಳೆಯ ಪತಿ ಗುಜರಾತ್‌ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಎಂಟು ತಿಂಗಳ ಹಿಂದೆಯಷ್ಟೇ ಮನೆ ಬಿಟ್ಟು ಹೋಗಿದ್ದ. ಬಕ್ರೀದ್ನಂದು ಮಹಿಳೆ ತನ್ನ ಮಕ್ಕಳನ್ನು ಹೊರಗೆ ಕರೆದೊಯ್ಯುವ ನೆಪದಲ್ಲಿ ಕರೆತಂದು ಕೊಳಕ್ಕೆ ಎಸೆದಿದ್ದಳು. ಮಹಿಳೆ ತನ್ನ ಮಕ್ಕಳನ್ನು ಏಕೆ ಕೊಂದಳು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕಟೇಯ ಪೊಲೀಸ್ ಠಾಣಾ ವ್ಯಾಪ್ತಿಯ ಕೌಲ್ರಾಹಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 4 ವರ್ಷದ ಬಾಲಕಿ ಅಫ್ರಿನ್, ಕೊಳದಲ್ಲಿದ್ದ ಹುಲ್ಲಿನ ರಾಶಿಯನ್ನು ಹಿಡಿದು ಬದುಕಿದ್ದಳು. ಬಾಲಕಿ ಅಳುತ್ತಿರುವುದನ್ನು ಗಮನಿಸಿದ ದಾರಿಹೋಕರೊಬ್ಬರು ಬಾಲಕಿಯನ್ನು ರಕ್ಷಿಸಿದ್ದಾರೆ.
ಮೃತ ಮೂವರು ಮಕ್ಕಳನ್ನು 2 ವರ್ಷದ ತೈಬಾ, 3 ವರ್ಷದ ಮುಸೈಬಾ ಮತ್ತು 8 ವರ್ಷದ ಗುಲಾಬ್ಸರ್ ಎಂದು ಗುರುತಿಸಲಾಗಿದೆ.