ಬಿಕಾನೆರ್: 300 ಕ್ಕೂ ಹೆಚ್ಚು ಪಾರಿವಾಳಗಳು ನಿಗೂಢವಾಗಿ ಸತ್ತು ಬಿದ್ದಿರುವ ಘಟನೆ ಶ್ರೀಕೋಲಾಯತ್ ತಾಲೂಕಿನ ರೋಹಿ ಗ್ರಾಮದಲ್ಲಿ ನಡೆದಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಹಕ್ಕಿಜ್ವರದ ಆತಂಕ ಆವರಿಸಿದೆ.
ರೋಹಿ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯ ಪಾರಿವಾಳಗಳು ಶವವಾಗಿ ಪತ್ತೆಯಾದ ನಂತರ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಪಾರಿವಾಳಗಳ ಸಾವಿಗೆ ಹಕ್ಕಿಜ್ವರವೇ ಕಾರಣವಿರಬಹುದು ಎಂದು ಗ್ರಾಮಸ್ಥರು ಭೀತಿಗೊಳಗಾಗಿದ್ದಾರೆ. ಈ ಪಾರಿವಾಳಗಳು ಮೃತಪಟ್ಟಿರುವುದರ ಬಗ್ಗೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಭಾನುವಾರ ಸಂಜೆ ತನಕ ಯಾವುದೇ ಮಾಹಿತಿ ಇರಲಿಲ್ಲ.
ಈ ಪ್ರದೇಶದಲ್ಲಿ ಆಡು ಮೇಯಿಸುತ್ತಿದ್ದಾಗ ಕುರಿಗಾಹಿಗಳು ಮೃತ ಪಾರಿವಾಳಗಳನ್ನು ನೋಡಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು ಮೃತ ಪಾರಿವಾಳಗಳ ರಾಶಿ ನೋಡಿ ದಿಗ್ಭ್ರಾಂತಿಗೊಳಗಾದರು. ನಂತರ ಈ ಘಟನೆಯ ಮಾಹಿತಿಯನ್ನು ಅರಣ್ಯ ಇಲಾಖೆಗೆ ರವಾನಿಸಿದರು.
ಮೃತ ಪಾರಿವಾಳಗಳ ಮಾದರಿಗಳನ್ನು ಪರಿಶೀಲಿಸಿದ ನಂತರವೇ ಸಾವಿಗೆ ಕಾರಣ ಸ್ಪಷ್ಟವಾಗಲಿದೆ.