ಗಿರಿಡ್(ಜಾರ್ಖಂಡ್): ಜಾನುವಾರುಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಗ್ರಾಮಸ್ಥರು ಹಿಡಿದು ತೀವ್ರವಾಗಿ ಥಳಿಸಿ ಕೊಂದಿರುವ ಘಟನೆ ಗಿರಿಡ್‌ನ ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿ ಬಯಲು ಸೀಮೆ ಶಾದಿ ಗಂವಾರ್ ಗ್ರಾಮದಲ್ಲಿ ನಡೆದಿದೆ. ಸಿಮಾರಿಯಾ ನಿವಾಸಿ ವಿನೋದ್ ಚೌಧರಿ ಮೃತ ವ್ಯಕ್ತಿ. ಸ್ಥಳೀಯರ ಮಾಹಿತಿ ಮೇರೆಗೆ ಎಸ್‌ಡಿಪಿಒ ಅನಿಲ್ ಕುಮಾರ್ ಸಿಂಗ್ ಮತ್ತು ಮುಫಾಸಿಲ್ ಪೊಲೀಸ್ ಠಾಣೆಯ ಪ್ರಭಾರಿ ವಿನಯ್ ಕುಮಾರ್ ರಾಮ್ ದಲ್ಬಾಲ್ ತಕ್ಷಣ ಸ್ಥಳಕ್ಕೆ ಆಗಮಿಸಿ ಆರೋಪಿಯ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಡಿ.31ರ ಮಧ್ಯರಾತ್ರಿ ಆದಿವಾಸಿಗಳ ಪ್ರಾಬಲ್ಯದ ಬಯಲು ಸೀಮೆ ಶಾದಿ ಗಂವಾರ್ ಗ್ರಾಮದಲ್ಲಿ ವಿನೋದ್ ಎಂಬಾತ ಕಳ್ಳತನ ಮಾಡಲೂ ಬಿರಾಲಾಲ್ ತುಡು ಎಂಬುವರ ಮನೆಯ ದನಗಳ ಕೊಟ್ಟಿಗೆಗೆ ನುಗ್ಗಿದ್ದಾನೆ. ಆಡುಗಳು ಹಾಗೂ ಹಸುಗಳನ್ನು ಕದ್ದೊಯ್ಯಲು ಪ್ರಾರಂಭಿಸಿದ್ದಾನೆ. ಈ ವೇಳೆ ಗಾಬರಿಗೊಂಡ ಹಸು, ಆಡುಗಳು ಅತ್ತಿಂದಿತ್ತ ಜಿಗಿದಾಡಲೂ ಪ್ರಾರಂಭಿಸಿವೆ.
ದನಗಳ ಸದ್ದು ಕೇಳಿ ಎಚ್ಚೆತ್ತುಕೊಂಡ ಕುಟುಂಬಸ್ಥರು ಗಾಬರಿಗೊಂಡಿದ್ದಾರೆ. ಜಾನುವಾರುಗಳಿಗೆ ಯಾರೋ ಏನೋ ಮಾಡುತ್ತಿರಬಹುದೆಂದು ಶಂಕೆ ವ್ಯಕ್ತಪಡಿಸಿ ಕೂಗಾಡಿದ್ದಾರೆ. ಈ ವೇಳೆ ಮನೆ ಮಾಲೀಕ ಬಿರಾಲಾಲ್ ಅವರು ಮಲಗಿದ್ದ ಕೊಠಡಿಯಿಂದ ಹೊರಬರಲು ಪ್ರಯತ್ನಿಸಿದ್ದಾರೆ. ಆದರೆ ಕೋಣೆಗೆ ಹೊರಗಿನಿಂದ ಬೀಗ ಹಾಕಲ್ಪಟ್ಟಿತ್ತು. ಆದರೂ ಕೋಣೆಯ ಬಾಗಿಲನ್ನು ಒಳಗಿನಿಂದ ಕಿತ್ತುಹಾಕಿ ಬಿಲ್ಲು ಮತ್ತು ಬಾಣದೊಂದಿಗೆ ಹೊರಬಂದಿದ್ದಾರೆ. ಬಿರಾಲಾಲ್ ಮೇಲೆರಗಿದ ವಿನೋದ್ ಹಲ್ಲೆ ನಡೆಸಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಈ ಗಲಾಟೆ ಕೇಳಿ ಮನೆಯ ಸುತ್ತಲಿನ ಜನರು ಎದ್ದು ಕಳ್ಳನನ್ನು ಹಿಡಿಯಲು ಯತ್ನಿಸಿದ್ದಾರೆ. ಆಗ ಜಾನುವಾರುಗಳ ಮಾಲೀಕ ಬಿರಾಲಾಲ್ ಗಾಯಗೊಳಿಸಿ, ಓಡಿ ಬರುತ್ತಿದ್ದ ವಿನೋದ್ ಎಂಬ ಕಳ್ಳನನ್ನು ಸುತ್ತವರಿದ ಗ್ರಾಮಸ್ಥರು ತೀವ್ರವಾಗಿ ಥಳಿಸಲು ಪ್ರಾರಂಭಿಸಿದ್ದಾರೆ. ಗ್ರಾಮಸ್ಥರ ಥಳಿತಕ್ಕೆ ಗಾಯಗೊಂಡಿದ್ದ ವಿನೋದ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
ಈ ಘಟನೆಯ ಮಾಹಿತಿ ಬೆಳಗ್ಗೆ ಇಡೀ ಗ್ರಾಮದಲ್ಲಿ ಹಬ್ಬಿದೆ. ಮಾಹಿತಿ ಮೇರೆಗೆ ಜಿಲ್ಲಾಪರಿಷತ್ ಸದಸ್ಯ ಪ್ರವೀಣ್ ಮುರ್ಮು, ಮುಖ್ಯಾಧಿಕಾರಿ ಫೂಲಚಂದ್ ಬಸ್ಕೆ, ಸಂಜಯ್ ಯಾದವ್, ಪ್ರಕಾಶ್ ಸಿಂಗ್ ಆಗಮಿಸಿ, ಎಲ್ಲ ಗ್ರಾಮಸ್ಥರ ಜತೆ ಮಾತನಾಡಿ ವಿಚಾರಿಸಿದ್ದಾರೆ. ಜಾನುವಾರುಗಳ ಮಾಲೀಕ ಬಿರಾಲಾಲ್ ಅವರನ್ನು ಗಾಯಗೊಳಿಸಿ, ಓಡಿ ಬರುತ್ತಿದ್ದ ವಿನೋದ್ ಎಂಬಾತನನ್ನು ಸುತ್ತುವರಿದ ಗ್ರಾಮಸ್ಥರು ಥಳಿಸಿದ್ದು, ಇದು ಆತ್ಮರಕ್ಷಣೆಗಾಗಿ ನಡೆದ ಘಟನೆ ಎಂದು ಹೇಳಿದ್ದಾರೆ.
ಗ್ರಾಮಸ್ಥರು ಕಳ್ಳತನದ ಆರೋಪಿಯನ್ನು ಸಿಟ್ಟಿಗೆದ್ದು ಥಳಿಸಿ ತೀವ್ರ ಗಾಯಗೊಳಿಸಿದ್ದರಿಂದ ಆತ ಸಾವಿಗೀಡಾಗಿದ್ದಾನೆ. ಆತ ಜಾನುವಾರು ಕದಿಯಲು ಬಂದಿದ್ದ ಎಂದು ಹೇಳುತ್ತಿದ್ದು, ಇದರ ಬಗ್ಗೆ ಕೈಗೊಳ್ಳಲಾಗುವುದು ಎಂದು ಗಿರಿಡ್ ಮುಫಾಸಿಲ್ ಪೊಲೀಸ್ ಠಾಣೆ ಪ್ರಭಾರಿ ವಿನಯ್ ಕುಮಾರ್ ರಾಮ್ ದಲ್ಬಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಕೃಷ್ಣಾ ಎಡದಂಡೆ ಕಾಲುವೆಯ ಸೇತುವೆಗೆ ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು