ಹಿಂಗೋಲಿ (ಮಹಾರಾಷ್ಟ್ರ): ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯೆ ಪ್ರದ್ನ್ಯಾ ಸತವ್ ಅವರಿಗೆ ವ್ಯಕ್ತಿಯೊಬ್ಬರು ಕಪಾಳಮೋಕ್ಷ ಮಾಡಿರುವ ಘಟನೆ ಮಹಾರಾಷ್ಟ್ರದ ಹಿಂಗೋಲಿಯಲ್ಲಿ ನಡೆದಿದೆ. ಈ ಬಗ್ಗೆ ಎಂಎಲ್ಸಿ ನೀಡಿರುವ ದೂರಿನ ಮೇರೆಗೆ ಪೊಲೀಸರು 40 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಕಾಂಗ್ರೆಸ್ ನಾಯಕ ದಿ.ರಾಜೀವ್ ಸತವ್ ಪತ್ನಿ ಪ್ರದ್ನ್ಯಾ ಕಳೆದ ಕೆಲವು ದಿನಗಳಿಂದ ಹಿಂಗೋಲಿ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಪಕ್ಷದ ಕಾರ್ಯಕರ್ತರೊಂದಿಗೆ ವಿವಿಧೆಡೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತಿದ್ದಾರೆ. ಬುಧವಾರ ರಾತ್ರಿ 8.30ರ ಸುಮಾರಿಗೆ ಕಸ್ಬೆ ಧಾವಂಡ ಗ್ರಾಮಕ್ಕೆ ಅವರು ಭೇಟಿ ಕೊಟ್ಟಿದ್ದರು.
ಈ ವೇಳೆ ಗ್ರಾಮಸ್ಥರು ಬಂದು ಕಾರು ನಿಲ್ಲಿಸಿದ್ದರು. ಕಾರಿನಿಂದಳಿದು ಅವರು ಜನರೊಂದಿಗೆ ಮಾತನಾಡುತ್ತಿದ್ದರು. ಆಗ ಒಬ್ಬ ವ್ಯಕ್ತಿ ಹಿಂದಿನಿಂದ ಬಂದು ಪ್ರದ್ನ್ಯಾ ಅವರನ್ನು ಎಳೆದು ಕೆನ್ನೆಗೆ ಬಲವಾಗಿ ಬಾರಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಕಾಳಂನೂರಿ ಠಾಣೆಗೆ ತೆರಳಿ ಕಾಂಗ್ರೆಸ್ ನಾಯಕಿ ದೂರು ದಾಖಲಿಸಿದ್ದಾರೆ.
ನನ್ನ ಜೀವಕ್ಕೆ ಬೆದರಿಕೆ ಇದೆ - ಪ್ರದ್ನ್ಯಾ: ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯೆ ನೀಡಿರುವ ಎಂಎಲ್ಸಿ ಪ್ರದ್ನ್ಯಾ, ಕಸ್ಬೆ ಧಾವಂಡಾ ಗ್ರಾಮದಲ್ಲಿ ನನ್ನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ದಾಳಿ ಮಾಡಿದ್ದಾನೆ. ಇದು ನನ್ನನ್ನು ಗಾಯಗೊಳಿಸುವ ಗಂಭೀರ ಪ್ರಯತ್ನ. ನನ್ನ ಜೀವಕ್ಕೆ ಬೆದರಿಕೆ ಇದೆ ಎಂದು ದೂರಿದ್ದಾರೆ.
ನನ್ನ ಮೇಲೆ ಎಷ್ಟೇ ದಾಳಿ ನಡೆದರೂ ಹೆದರುವುದಿಲ್ಲ. ಮಹಿಳಾ ಶಾಸಕರ ಮೇಲೆ ಹಲ್ಲೆ ನಡೆಸುವುದು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಇಂತಹ ದಾಳಿಗಳು ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ದಿವಂಗತ ಸಂಸದ ಸತವ್ ಆಶೀರ್ವಾದವಿದ್ದು, ಜನರಿಗಾಗಿ ನಾನು ಕೆಲಸ ಮುಂದುವರೆಸುತ್ತೇವೆ. ಅವರ ಕನಸನ್ನು ನನಸಾಗಿಸಲು ಹಗಲಿರುಳು ಶ್ರಮಿಸುತ್ತೇನೆ. ನನ್ನ ಜೀವಕ್ಕೆ ಅಪಾಯವಿದ್ದರೂ ಜನರ ಸೇವೆ ನಿಲ್ಲಿಸುವುದಿಲ್ಲ. ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ, ಈ ಘಟನೆಗೆ ಸಂಬಂಧಿಸಿದಂತೆ ಬುಧವಾರ ತಡರಾತ್ರಿ ಆರೋಪಿ ಮಹೇಂದ್ರ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆಯ ಹಿಂದಿನ ಉದ್ದೇಶ ಪತ್ತೆ ಹಚ್ಚುವ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಯ ವಿರುದ್ಧ ಐಪಿಸಿಯ ಸೆಕ್ಷನ್ 352, 353 ಮತ್ತು 323ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದಿತ್ಯ ಠಾಕ್ರೆ ಕಾರಿನ ಮೇಲೂ ಆಗಿತ್ತು ದಾಳಿ: ಕೆಲ ದಿನಗಳ ದಿನಗಳ ಹಿಂದೆ ಔರಂಗಾಬಾದ್ ಜಿಲ್ಲೆಯ ಮಹಲ್‌ಗಾಂವ್‌ನಲ್ಲಿ ಶಿವಸೇನೆ (ಯುಬಿಟಿ) ಪಕ್ಷದ ಯುವ ನಾಯಕ, ಮಾಜಿ ಸಚಿವ ಆದಿತ್ಯ ಠಾಕ್ರೆ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಾನಾ ಪಟೋಲೆ, ಎನ್ಸಿಪಿ ಅಧ್ಯಕ್ಷ ಅಜಿತ್ ಪವಾರ್ ಮತ್ತು ಶಿವಸೇನೆಯ ಸಂಸದ ಸಂಜಯ್ ರಾವುತ್, ಮಹಾರಾಷ್ಟ್ರದಲ್ಲಿ ಚುನಾಯಿತ ಪ್ರತಿನಿಧಿಗಳು ಕೂಡ ಅಸುರಕ್ಷಿತರಾಗಿದ್ದಾರೆ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಪ್ರತಿಪಕ್ಷಗಳ ನಾಯಕರಿಗೆ ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದ್ದರು.
ಇದನ್ನೂ ಓದಿ: ಶಿವಸಂವಾದ ಯಾತ್ರೆ ವೇಳೆ ಆದಿತ್ಯ ಠಾಕ್ರೆ ಕಾರಿನ ಮೇಲೆ ಕಲ್ಲು ತೂರಾಟ