ಐಜ್ವಾಲ್(ಮಿಜೋರಾಂ): ಮಿಜೋರಾಂ ರಾಜ್ಯದ ದೂರದ ಹಳ್ಳಿಯ ಕಾಲೇಜು ವಿದ್ಯಾರ್ಥಿಗಳ ಗುಂಪೊಂದು ತಮ್ಮ ಆನ್ಲೈನ್ ಸೆಮಿಸ್ಟರ್ ಪರೀಕ್ಷೆ ಬರೆಯಲು ಕಳಪೆ ನೆಟ್‌ವರ್ಕ್ ಸಂಪರ್ಕದಿಂದಾಗಿ ನಿತ್ಯ ಬೆಟ್ಟ ಹತ್ತಿ-ಇಳಿಯುತ್ತಿದ್ದಾರೆ.
ಐಜ್ವಾಲ್‌ನಿಂದ 400 ಕಿ.ಮೀ. ದೂರದಲ್ಲಿ ಇರುವ ಸೈಹಾ ಜಿಲ್ಲೆಯ ದೂರದ ಮಾವ್ರೆ ಗ್ರಾಮದಲ್ಲಿ ಇಂಟರ್ನೆಟ್ ಸಂಪರ್ಕದ ಕೊರತೆ ಇದೆ. ಪರಿಣಾಮ, ಮಿಜೋರಾಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತ್ಲಾವ್ ತ್ಲಾ ಬೆಟ್ಟ ಹತ್ತಿಳಿಯುತ್ತಿದ್ದಾರೆ. ಯೋಗ್ಯವಾದ ಇಂಟರ್ನೆಟ್ ಪಡೆಯಲು ಹಳ್ಳಿಯ ಸಮೀಪವಿರುವ ಏಕೈಕ ತಾಣ ಇದಾಗಿದೆ.
ಇದನ್ನೂ ಓದಿ: ವಿಶ್ವ ಸಾಗರ ದಿನ: ಸಮುದ್ರವನ್ನ ಸಂರಕ್ಷಿಸಲು ಮರಳು ಕಲಾಕೃತಿ ಮೂಲಕ ಪಟ್ನಾಯಕ್ ಕರೆ
ಬೆಟ್ಟದ ಮೇಲಿರುವ ಬಾಳೆ ಎಲೆಗಳನ್ನು ಹೊಂದಿರುವ ತಾತ್ಕಾಲಿಕ ಬಿದಿರಿನ ಗುಡಿಸಲು ವಿದ್ಯಾರ್ಥಿಗಳಿಗೆ ಪ್ರತಿಕೂಲ ಹವಾಮಾನದಿಂದ ರಕ್ಷಣೆ ನೀಡುತ್ತದೆ. ವಿದ್ಯಾರ್ಥಿಗಳೆಲ್ಲಾ ಈ ಗುಡಿಸಲಿನೊಳಗೆ ಒಟ್ಟಿಗೆ ಕುಳಿತು ತಮ್ಮ ಪದವಿಪೂರ್ವ ಪರೀಕ್ಷೆಗಳನ್ನು ಬರೆಯುತ್ತಾರೆ.
ಮಾವ್ರೈ ಸೈಹಾ ಜಿಲ್ಲೆಯ ದೂರದ ಹಳ್ಳಿಯಾಗಿದ್ದು, ಸಂಪೂರ್ಣವಾಗಿ ಬೆಟ್ಟಗಳಿಂದ ಆವೃತವಾಗಿದೆ. ಆದ್ದರಿಂದ ನಮ್ಮ ಗ್ರಾಮದಲ್ಲಿ ಇಂಟರ್ನೆಟ್ ಸಂಪರ್ಕವಿಲ್ಲ ಅನ್ನೋದು ವಿದ್ಯಾರ್ಥಿಯೊಬ್ಬನ ಮಾತು.
ರಾಷ್ಟ್ರವು 5ಜಿ ನೆಟ್‌ವರ್ಕ್‌ಗಾಗಿ ಕಾಯುತ್ತಿರುವ ಸಮಯದಲ್ಲಿ 1,700 ಜನಸಂಖ್ಯೆ ಹೊಂದಿರುವ ಈ ಗ್ರಾಮವು ಕೇವಲ 2 ಜಿ ಸಂಪರ್ಕ ಹೊಂದಿದ್ದು ಸಂಕಷ್ಟ ಅನುಭವಿಸುತ್ತಿದೆ.
ವಿದ್ಯಾರ್ಥಿಗಳು ಬೆಟ್ಟದ ತುದಿಯಲ್ಲಿ ಪರೀಕ್ಷೆಗಳನ್ನು ಕಷ್ಟಪಟ್ಟು ಬರೆಯುತ್ತಿದ್ದಾರೆ. ಗ್ರಾಮದಲ್ಲಿ 4ಜಿ ನೆಟ್‌ವರ್ಕ್ ಇಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ನಾವು ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ವಿದ್ಯಾರ್ಥಿಗಳ ಸಂಘಟನೆ ಹೇಳಿದೆ.