ಮುಂಬೈ (ಮಹಾರಾಷ್ಟ್ರ) : ಕೋವಿಡ್ ಲಸಿಕೆಗಳನ್ನು ಬೆರೆಸುವ ಆಲೋಚನೆಯನ್ನು ವಿರೋಧಿಸುತ್ತಿದ್ದೇವೆ ಎಂದು ಕೋವಿಶೀಲ್ಡ್ ತಯಾರಕ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಅಧ್ಯಕ್ಷ ಡಾ. ಸೈರಸ್ ಪೂನಾವಾಲ ಹೇಳಿದ್ದಾರೆ. ಡೋಸ್ಗಳನ್ನು ಬೆರೆಸುವ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರತಿಷ್ಠಿತ ಲೋಕಮಾನ್ಯ ತಿಲಕ ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಇತ್ತೀಚೆಗೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧ್ಯಯನವೊಂದನ್ನು ನಡೆಸಿದೆ. ಇದರಲ್ಲಿ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳ ಸಂಯೋಜನೆಯ ವ್ಯಾಕ್ಸಿನ್ ಅನ್ನು 18 ಜನರ ಮೇಲೆ ಪ್ರಯೋಗಿಸಿದ್ದು, ಉತ್ತಮ ಸುರಕ್ಷತೆ ಮತ್ತು ಇಮ್ಯುನೊಜೆನಿಸಿಟಿ ಫಲಿತಾಂಶಗಳನ್ನು ಪಡೆದಿದೆ.
ಅಧ್ಯಯನದ ಪ್ರಕಾರ, ಅಡೆನೊವೈರಸ್ ವೆಕ್ಟರ್ ಪ್ಲಾಟ್‌ಫಾರ್ಮ್ ಆಧಾರಿತ ಲಸಿಕೆಯ ಸಂಯೋಜನೆಯೊಂದಿಗೆ ಇಮ್ಯೂನೈಸೇಶನ್ ನಂತರ ನಿಷ್ಕ್ರಿಯಗೊಂಡ ಸಂಪೂರ್ಣ ವೈರಸ್ ಲಸಿಕೆ ಸುರಕ್ಷಿತ ಮಾತ್ರವಲ್ಲದೆ ಉತ್ತಮ ಇಮ್ಯುನೊಜೆನಿಸಿಟಿಯನ್ನು ನೀಡಿದೆ ಎಂದರು.
ಇದೇ ವೇಳೆ, ಲಸಿಕೆ ರಫ್ತು ಮೇಲಿನ ನಿರ್ಬಂಧದ ನಿರ್ಧಾರವು ಕೇಂದ್ರ ಸರ್ಕಾರದ ಅತ್ಯಂತ ಕೆಟ್ಟ ಕ್ರಮ ಎಂದು ಸೈರಸ್ ಪೂನಾವಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋದಿ ಸರ್ಕಾರದ ಈ ನಿರ್ಧಾರ ತಮ್ಮ ಸಂಸ್ಥೆಯನ್ನು ಕಠಿಣ ಪರಿಸ್ಥಿತಿಗೆ ದೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಈ ವಿಷಯದ ಬಗ್ಗೆ ಮಾತನಾಡದಂತೆ ನನ್ನ ಮಗ ಮನವಿ ಮಾಡಿಕೊಂಡಿದ್ದಾನೆ. ಹಾಗಾಗಿ, ಸುಮ್ಮನಿದ್ದೇನೆ. ಆದರೆ, ರಫ್ತಿಗೆ ಅವಕಾಶ ನೀಡಬೇಕು ಎಂಬುದು ನನ್ನ ಅಭಿಪ್ರಾಯ’ ಎಂದು ಸೈರಸ್ ಪೂನಾವಾಲ ಹೇಳಿದ್ದಾರೆ.
170ಕ್ಕೂ ಹೆಚ್ಚು ದೇಶಗಳು ಲಸಿಕೆಗಳಿಗಾಗಿ ಎಸ್‌ಐಐ ಅನ್ನು ಅವಲಂಬಿಸಿವೆ. ನಿರ್ಣಾಯಕ ಅವಧಿಯಲ್ಲಿ ಪೂರೈಕೆಯನ್ನು ನಿಲ್ಲಿಸಿದ್ದಕ್ಕಾಗಿ ಕಂಪನಿಯನ್ನು ದೂಷಿಸಲಾಗುತ್ತಿದೆ. ಸಂಸ್ಥೆಯನ್ನು ನಂಬಿ ದೇಶಗಳು ಕಂಪನಿಗೆ ಕೋಟ್ಯಂತರ ಮೊತ್ತವನ್ನು ಮುಂಗಡವಾಗಿ ಪಾವತಿಸಿವೆ. ‘ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್’ ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ₹5,000 ಕೋಟಿ ನೀಡಿವೆ ಎಂದು ಅವರು ಇದೇ ವೇಳೆ ಬಹಿರಂಗಪಡಿಸಿದರು.
ಗೇಟ್ಸ್ ಫೌಂಡೇಶನ್ ಮತ್ತು ಡಬ್ಲ್ಯುಎಚ್‌ಒಗೆ ಹಣ ಹಿಂದಿರುಗಿಸಲು ನಾನು ಮುಂದಾಗಿದ್ದೆ. ಆದರೆ, ಭಾರತ ಸರ್ಕಾರವು ರಫ್ತು ನಿಷೇಧವನ್ನು ಶೀಘ್ರವೇ ತೆರವು ಮಾಡುತ್ತದೆ ಎಂಬ ಭರವಸೆಯಲ್ಲಿದ್ದೇನೆ ಎಂದರು. ಕೋವಿಡ್ ಎರಡನೇ ಅಲೆಯು ಉತ್ತುಂಗಕ್ಕೇರಲು ಪ್ರಾರಂಭಿಸಿದಾಗ ಏಪ್ರಿಲ್‌ನಲ್ಲಿ ಭಾರತವು ಲಸಿಕೆ ರಫ್ತು ನಿಷೇಧಿಸಿತು.