ಬುಲಂದ್‌ಶಹರ್ (ಉತ್ತರ ಪ್ರದೇಶ): ಹೊಲದಲ್ಲಿ ಕೆಲಸ ಮಾಡಿ ದಣಿದ ಬಾಲಕಿಯೊಬ್ಬಳು ನೀರು ಕೇಳಲು ಪರಿಚಯಸ್ಥರ ಮನೆಗೆ ತೆರಳಿದ್ದಾಳೆ. ಆದ್ರೆ ಆ ವ್ಯಕ್ತಿ ಬಾಲಕಿ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಅನುಪ್ಶಹರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉತ್ತರಪ್ರದೇಶದಲ್ಲಿ ಕ್ರೈಂಗಳಿಗೆ ಕಡಿವಾಣಗಳು ಬೀಳುತ್ತಿಲ್ಲ. ಈಗ ಮತ್ತೊಂದು ದುರಂತ ಘಟನೆಯೊಂದು ಬೆಳಕಿಗೆ ಬಂದಿದೆ. ನಾಪತ್ತೆಯಾದ ಆರು ದಿನಗಳ ಬಳಿಕ 13 ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.
ಮಾಹಿತಿಗಳ ಪ್ರಕಾರ
ಫೆಬ್ರವರಿ 25ರಂದು ಬಾಲಕಿ ತನ್ನ ಸಹೋದರಿ ಮತ್ತು ತಾಯಿಯೊಂದಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಬಾಲಕಿಗೆ ದಾಹವಾಗಿದ್ದು, ಸಮೀಪದ ಪರಿಚಯಸ್ಥರಾದ ಹರೇಂದ್ರ ಮನೆಗೆ ತೆರಳಿದ್ದಾಳೆ. ನೀರು ಕೊಡುವ ನೆಪದಲ್ಲಿ ಹರೇಂದ್ರ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಬಳಿಕ ಬಾಲಕಿಯನ್ನು ಬರ್ಬರವಾಗಿ ಕೊಲೆ ಮಾಡಿದಲ್ಲದೇ ಆಕೆಯ ದೇಹವನ್ನು ಮನೆಯಂಗಳದ ಒಂದು ತೊಟ್ಟಿಯಲ್ಲಿ ಹೂತಾಕಿದ್ದಾನೆ.
ನಾಪತ್ತೆ ದೂರು ದಾಖಲು
ಸಂಜೆಯಾದ ಬಳಿಕ ತಾಯಿ ಮತ್ತು ಬಾಲಕಿಯ ಸಹೋದರಿ ಮನೆಗೆ ತೆರಳಿದ್ದಾರೆ. ಮಗಳು ಮನೆಯಲ್ಲಿ ಕಾಣದ ಹಿನ್ನೆಲೆ ಗಾಬರಿಗೊಂಡ ಪೋಷಕರು ಗ್ರಾಮವೆಲ್ಲ ಹುಡುಕಿದ್ದಾರೆ. ಆದ್ರೂ ಸಹ ಪತ್ತೆಯಾಗಿಲ್ಲ. ಎರಡ್ಮೂರು ದಿನದ ಬಳಿಕ ಅಂದ್ರೆ ಫೆಬ್ರವರಿ 28ರಂದು ಪೋಷಕರು ಮಗಳು ಕಾಣೆಯಾಗಿರುವುದರ ಬಗ್ಗೆ ಅನುಪ್ಶಹರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರೋಪಿ ಪರಾರಿ
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದರು. ಪೊಲೀಸರು ಗ್ರಾಮದಲ್ಲಿ ಶೋಧ ಕಾರ್ಯ ಕೈಗೊಂಡಿದ್ದರು. ಪೊಲೀಸರ ಓಡಾಟದಿಂದ ಆರೋಪಿ ಹರೇಂದ್ರ ತನ್ನ ಮನೆಯಿಂದ ಕಾಲ್ಕಿತ್ತಿದ್ದನು. ಬಾಲಕಿ ಪೋಷಕರಿಗೆ ಹರೇಂದ್ರ ಮೇಲೆ ಅನುಮಾನ ಮೂಡಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು.
ನಗ್ನ ಸ್ಥಿತಿಯಲ್ಲಿ ಬಾಲಕಿ ಶವ ಪತ್ತೆ
ಪೊಲೀಸರು ಆರೋಪಿ ಹರೇಂದ್ರ ಮನೆ ಪರಿಶೀಲಿಸಿದ್ದಾರೆ. ಆದ್ರೂ ಸಹ ಪ್ರಯೋಜವಾಗಿರಲಿಲ್ಲ. ಮನೆಯಂಗಳದಲ್ಲಿ ಅನುಮಾನದ ಸ್ಥಿತಿಯಲ್ಲಿ ಮಣ್ಣು ಅಗೆದಿರುವುದು ಕಂಡಿದೆ. ಅನುಮಾನಗೊಂಡ ಪೊಲೀಸರು ಮಣ್ಣು ಅಗೆದು ನೋಡಿದಾಗ ಬಾಲಕಿ ಶವ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಗಳ ಮೃತ ದೇಹ ನೋಡುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಆರೋಪಿ ಪತ್ತೆಗೆ ಶೋಧ
ಪೊಲೀಸರು ಬಾಲಕಿ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ರವಾನಿಸಿದ್ದಾರೆ. ಆರೋಪಿ ಪರಾರಿಯಾಗಿದ್ದು, ಪೊಲೀಸರು ಆರೋಪಿ ಹರೇಂದ್ರಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ. ನಮಗೆ ನ್ಯಾಯ ಒದಗಿಸಿಕೊಡುವಂತೆ ಮೃತ ಬಾಲಕಿ ಪೋಷಕರು ಮನವಿ ಮಾಡಿದ್ದಾರೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.