ಸಿರೋಹಿ(ರಾಜಸ್ಥಾನ): ಜಿಲ್ಲೆಯ ರೋಹಿಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಚ್ಚಿಬೀಳಿಸುವ ಪ್ರಕರಣವೊಂದು ನಡೆದಿದೆ. ಮಧ್ಯವಯಸ್ಕ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಪ್ರಕರಣ ಬೆಳಕಿಗೆ ಬಂದಿದೆ. ಕಳ್ಳತನದ ಉದ್ದೇಶದಿಂದ ಮನೆಗೆ ನಾಲ್ವರು ದುಷ್ಕರ್ಮಿಗಳು ನುಗ್ಗಿದ್ದಾರೆ. ಕಳ್ಳತನ ಮಾಡಿದ ನಂತರ ಸಂತ್ರಸ್ತೆಯ ಪತಿಯನ್ನು ಕಟ್ಟಿ ಹಾಕಿದ್ದಾರೆ. ಬಳಿಕ ಆತನ ಎದರು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬುಧವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ನಂತರ, ಆರೋಪಿಗಳು ಸಂತ್ರಸ್ತೆಯ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ಸಂತ್ರಸ್ತ ದಂಪತಿ ಎರಡು ದಿನಗಳ ಕಾಲ ಮನೆಯಿಂದ ಹೊರಗೆ ಬಂದಿಲ್ಲ. ಎರಡು ದಿನಗಳ ಬಳಿಕ ಶುಕ್ರವಾರ ದಂಪತಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಬಳಿಕ ಕ್ರಮ ಕೈಗೊಂಡಿರುವ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನಾಲ್ವರು ದುಷ್ಕರ್ಮಿಗಳು ಕಳ್ಳತನ ಮಾಡುವ ಉದ್ದೇಶದಿಂದ ಆ ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿದ್ದ ಬೆಳ್ಳಿ ಆಭರಣ ಹಾಗೂ 1400 ನಗದನ್ನು ದೋಚಿದ್ದಾರೆ. ಇದಾದ ನಂತರ, ಮನೆಯಲ್ಲಿದ್ದ ಮಹಿಳೆ ಮೇಲೆ ದುಷ್ಕರ್ಮಿಗಳ ಕಣ್ಣು ಬಿದ್ದಿದೆ. ಕೂಡಲೇ ಮಹಿಳೆಯ ಪತಿಯನ್ನು ಒತ್ತೆಯಾಳಾಗಿಟ್ಟುಕೊಂಡು ಆತನ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಘಟನೆ ನಡೆದು ಎರಡು ದಿನಗಳ ಬಳಿಕ ಸಂತ್ರಸ್ತ ದಂಪತಿ ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಇಡೀ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ನಾಲ್ವರು ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ರೋಹಿಡಾ ಪೊಲೀಸ್ ಠಾಣಾಧಿಕಾರಿ ದೇವರಾಮ್ ತಿಳಿಸಿದ್ದಾರೆ.
ವಿಷಯದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಸಿರೋಹಿ ಪೊಲೀಸ್ ವರಿಷ್ಠಾಧಿಕಾರಿ ಮಮತಾ ಗುಪ್ತಾ, ಡಿಎಸ್ಪಿ ಜೇತು ಸಿಂಗ್ ಕರ್ನೋಟ್ ಮತ್ತು ಪೊಲೀಸ್ ಅಧಿಕಾರಿ ದೇವರಾಮ್ ಮೇ ಜಬ್ತಾ ಅವರು ಸ್ಥಳಕ್ಕೆ ಧಾವಿಸಿ ಘಟನೆಯ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಸಿರೋಹಿ ಎಸ್ಪಿ ಮಮತಾ ಗುಪ್ತಾ ಅವರ ಸೂಚನೆಯ ಮೇರೆಗೆ ರೋಹಿಡಾ ಪೊಲೀಸರು ಮತ್ತು ಸ್ವರೂಪಗಂಜ್ ಪೊಲೀಸರು ಪ್ರತ್ಯೇಕ ತಂಡಗಳನ್ನು ರಚಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇದಲ್ಲದೇ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಶೋಧ ಮುಂದುವರಿದಿದೆ.
ಓದಿ: ಧರ್ಮ ನಿಂದನೆ ಪ್ರಕರಣದ ಆರೋಪಿ ಹತ್ಯೆ ಕೇಸ್: ಮೂವರು ಶೂಟರ್ಗಳನ್ನು ಬಂಧಿಸಿದ ಪೊಲೀಸರು