ನವದೆಹಲಿ: ಭಾರತದ ರಾಷ್ಟ್ರೀಯತೆ, ವಿದೇಶಿ ಸಂಬಂಧ ಸೇರಿದಂತೆ ಸಾರ್ವಜನಿಕ ವಿಚಾರಗಳ ಕುರಿತಾಗಿ ಸುಳ್ಳು ಮಾಹಿತಿ ಹರಡುತ್ತಿದ್ದ ಫೇಸ್ಬುಕ್ ಹಾಗೂ 16 ಯೂಟ್ಯೂಬ್ ಚಾನೆಲ್ಗಳ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದೆ. ಇದರಲ್ಲಿ ಪಾಕಿಸ್ತಾನದಿಂದ ನಿರ್ವಹಿಸಲ್ಪಡುತ್ತಿದ್ದ ಆರು ಚಾನೆಲ್ಗಳು ಸೇರಿಕೊಂಡಿವೆ ಎಂದು ತಿಳಿದು ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದು, ಈ ಸುದ್ದಿವಾಹಿನಿಗಳು 68 ಕೋಟಿಗೂ ಅಧಿಕ ವೀಕ್ಷಕರನ್ನೊಳಗೊಂಡಿದ್ದವು ಎಂದು ತಿಳಿಸಿದ್ದಾರೆ. ಭಾರತದ ಮಾಹಿತಿ ತಂತ್ರಜ್ಞಾನ ನಿಯಮ 2021ರ ಅಡಿ ಇವುಗಳ ಮೇಲೆ ನಿರ್ಬಂಧ ಹಾಕಲಾಗಿದ್ದು, 10 ಭಾರತೀಯ ಮತ್ತು 6 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್ಗಳು ಇವಾಗಿವೆ ಎಂದಿದ್ದಾರೆ. ಈ ಚಾನೆಲ್ಗಳ ಮೂಲಕ ಭಾರತದಲ್ಲಿ ಭಯ ಹುಟ್ಟಿಸುವುದು, ಕೋಮು ಸೌಹಾರ್ದತೆ ಪ್ರಚೋದನೆಗೆ ದಾರಿ ಮಾಡಿಕೊಡುತ್ತಿದ್ದವು ಎನ್ನಲಾಗಿದೆ.
ಇದನ್ನೂ ಓದಿ: 'ನೀವೂ ದಾದಾಗಿರಿ ಮಾಡಿದರೆ..' ಹನುಮಾನ್ ಚಾಲೀಸಾ ಬಗ್ಗೆ ಉದ್ಧವ್ ಠಾಕ್ರೆ ಹೇಳಿದ್ದೇನು!?
ಈ ಹಿಂದೆ ಕೂಡ ಭಾರತದ ಭದ್ರತೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡುತ್ತಿದ್ದ 22 ಯೂಟ್ಯೂಬ್ ಚಾನೆಲ್ಗಳ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿತ್ತು. ಈ ಚಾನೆಲ್ಗಳು ಜಮ್ಮು-ಕಾಶ್ಮೀರ ಸೇರಿದಂತೆ ವಿವಿಧ ವಿಷಯಗಳ ಕುರಿತಾಗಿ ನಕಲಿ ಮಾಹಿತಿ ಹಂಚಿಕೊಳ್ಳುತ್ತಿದ್ದವು.