ಆಲಪ್ಪುಳ: ಕೇರಳದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಇದು ವಲಸೆ ಹಕ್ಕಿಗಳಿಂದ ಹರಡಿರಬಹುದು ಎಂದು ಸಚಿವ ಕೆ. ರಾಜು ತಿಳಿಸಿದರು.
ಬುಧವಾರದಂದು ಆಲಪ್ಪುಳ ಕಲೆಕ್ಟರೇಟ್‌ನಲ್ಲಿ ನಡೆದ ಮೌಲ್ಯಮಾಪನ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ವಲಸೆ ಹಕ್ಕಿಗಳು ಸಾಮಾನ್ಯವಾಗಿ ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ರಾಜ್ಯಕ್ಕೆ ಲಗ್ಗೆಯಿಡುತ್ತವೆ. ಈ ಪಕ್ಷಿಗಳ ಅಂಶ ಇಲ್ಲಿನ ಜಲಮೂಲಗಳಲ್ಲಿ ಬೆರೆಯುತ್ತದೆ. ಇದರಿಂದಾಗಿ H5N8 ಸೋಂಕು ಇತರ ಪಕ್ಷಿಗಳಿಗೆ ತಗುಲಿದೆ ಎಂದು ಊಹಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಕುಟ್ಟನಾಡ್ ಈ ಪಕ್ಷಿಗಳ ವಲಸೆ ಮಾರ್ಗವಾಗಿದೆ. ಆಲಪ್ಪುಳ ಮತ್ತು ಕೊಟ್ಟಾಯಂನ ನೀಂದೂರ್ ಪ್ರದೇಶಗಳಲ್ಲಿ ಈ ಹಕ್ಕಿಜ್ವರ ಹೆಚ್ಚಾಗಿ ಕಾಣಿಸಿಕೊಂಡಿದೆ ಎಂದು ತಿಳಿಸಿದರು.
ಭಾರತದ ಇತರ 5 ರಾಜ್ಯಗಳಲ್ಲಿಯೂ ಪಕ್ಷಿ ಜ್ವರ ವರದಿಯಾಗಿದೆ. ಪಕ್ಷಿಗಳಲ್ಲಿ ಪ್ರಸ್ತುತ ಪತ್ತೆಯಾಗಿರುವ ವೈರಸ್ ಮನುಷ್ಯರಿಗೆ ತಗಲುವ ಸಾಧ್ಯತೆಯಿಲ್ಲ. ಆದಾಗ್ಯೂ, ವೈರಸ್ ಯಾವುದೇ ಸಮಯದಲ್ಲಿ ರೂಪಾಂತರಕ್ಕೆ ಒಳಗಾಗಬಹುದು. ಮಾನವರಿಗೆ ಹರಡುವ ಸಾಧ್ಯತೆಯನ್ನು ನಾವು ತಳ್ಳಿಹಾಕಲು ಸಾಧ್ಯವಿಲ್ಲ. ರೂಪಾಂತರದ ಸಾಧ್ಯತೆಯನ್ನು ಪರಿಗಣಿಸಿ ಆರೋಗ್ಯ ಕಾರ್ಯಕರ್ತರು ಮುಂದಿನ ಹತ್ತು ದಿನಗಳವರೆಗೆ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಜಾಗರೂಕತೆ ಮುಂದುವರಿಸಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.