ನವದೆಹಲಿ: ಬ್ರಾಹ್ಮಣ ಪಂಡಿತರ ಹತ್ಯಾಕಾಂಡದ ಬಗ್ಗೆ ಹೇಳುವ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಟೀಕಿಸಿದ ಬೆನ್ನಲ್ಲೇ ಇದೀಗ ಇನ್ನೊಬ್ಬ ಮಾಜಿ ಸಿಎಂ, ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕೂಡ ಖಂಡಿಸಿದ್ದಾರೆ. ಬಿಜೆಪಿ ಧರ್ಮದ ಆಧಾರದ ಮೇಲೆ ಜನರನ್ನು ಇಬ್ಭಾಗ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಮತ್ತು ಕೇಂದ್ರ ಸರ್ಕಾರ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಿಸಲು ಹೇಳುತ್ತಿರುವುದರ ವಿರುದ್ಧ ವಾಗ್ದಾಳಿ ನಡೆಸಿದ ಮುಫ್ತಿ, ನಿಮ್ಮ 8 ವರ್ಷದ ಅಧಿಕಾರವಧಿಯಲ್ಲಿ ಕಾಶ್ಮೀರಿ ಪಂಡಿತರಿಗಾಗಿ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲರೂ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಬಿಜೆಪಿ ಮತ್ತು ಪ್ರಧಾನಿ ಕೇಂದ್ರ ಸರ್ಕಾರ ಸಿನಿಮಾದ ಪ್ರಚಾರ ಮಾಡುತ್ತಿದೆ. ಈ ರೀತಿ ಮಾಡುವ ಬದಲಾಗಿ ಅವರು ಕಳೆದ 8 ವರ್ಷಗಳಲ್ಲಿ ಕಾಶ್ಮೀರಿ ಪಂಡಿತರಿಗಾಗಿ ಏನಾದರೂ ಮಾಡಿದ್ದರೆ, ಅವರ ಪರಿಸ್ಥಿತಿ ಇಂದು ಭಿನ್ನವಾಗಿರುತ್ತಿತ್ತು. ಕಾಶ್ಮೀರಿ ಹಿಂದೂಗಳ ಹತ್ಯೆ ಕುರಿತಾದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನಿಟ್ಟುಕೊಂಡು ಧರ್ಮದ ಆಧಾರದ ಮೇಲೆ ಜನರನ್ನು ಪ್ರಚೋದಿಸಲು ಬಿಜೆಪಿ ಮುಂದಾಗಿದೆ. ಇದರ ಬದಲು ಸತ್ಯ ಅರಿಯಲು ಸಮಿತಿಯನ್ನು ರಚಿಸುವಂತೆ ಪಿಡಿಪಿ ಮುಖ್ಯಸ್ಥೆ ಕೋರಿದ್ದಾರೆ.
ಪ್ರತಿ ಕಾಶ್ಮೀರಿಗರನ್ನು ದ್ವೇಷಿಸಲಾಗಲ್ಲ: ಪಂಡಿತರ ಕುರಿತ ಸಿನಿಮಾವನ್ನು ನಾನು ನೋಡಿಲ್ಲ. ಚಿತ್ರದಲ್ಲಿ ಹಿಂಸಾಚಾರ, ರಕ್ತಪಾತದ ಬಗ್ಗೆ ತೋರಿಸಲಾಗಿದೆ. ವ್ಯಥೆ ಪಡುವ ದೃಶ್ಯಗಳಿವೆ ಎಂದು ಕೇಳಿದ್ದೇನೆ. ಕಾಶ್ಮೀರಿ ಪಂಡಿತರೊಂದಿಗೆ ಈ ಹಿಂದೆ ನಡೆದಿದ್ದೆಲ್ಲವೂ ಭಯಾನಕವೇ. ಅವರ ನೋವು ನನಗೂ ಗೊತ್ತು. ಆದರೆ, ಇದರ ಹೆಸರಲ್ಲಿ ಪ್ರತಿ ಕಾಶ್ಮೀರಿ ಮುಸ್ಲಿಮರನ್ನು ದ್ವೇಷಿಸಲು ಸಾಧ್ಯವಿಲ್ಲ ಎಂದರು.
ನಿನ್ನೆಯಷ್ಟೇ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ, ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಕಾಶ್ಮೀರದಲ್ಲಾದ ಪಂಡಿತರ ಹತ್ಯೆಗಳು ಮತ್ತು ವಲಸೆ ಬಗ್ಗೆ ತನಿಖೆಗೆ ಸತ್ಯಶೋಧನಾ ಸಮಿತಿಯನ್ನು ರಚಿಸಲು ಕರೆ ನೀಡಿದ್ದರು. ಇದೀಗ ಮೆಹೆಬೂಬಾ ಮುಫ್ತಿ ಅವರೂ ಕೂಡ ಕಾಶ್ಮೀರಿ ಪಂಡಿತರ ವಲಸೆ ಮಾತ್ರವಲ್ಲದೆ ಗುಜರಾತ್ ಮತ್ತು ದೆಹಲಿಯಲ್ಲಿ ನಡೆದ ಗಲಭೆಗಳ ಬಗ್ಗೆಯೂ ತನಿಖೆ ನಡೆಸಲು ಕೇಂದ್ರ ಸರ್ಕಾರ 'ಸತ್ಯ ಮತ್ತು ಸಾಮರಸ್ಯ ಆಯೋಗ'ವನ್ನು ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮಾಜಿ ಕ್ರಿಕೆಟಿಗ ಭಜ್ಜಿ, ದೆಹಲಿ ಶಾಸಕ ಚಡ್ಡಾ ಸೇರಿ ಐವರು ರಾಜ್ಯಸಭೆಗೆ ಅವಿರೋಧ ಆಯ್ಕೆ