ಶಿಲ್ಲಾಂಗ್: ಮೇಘಾಲಯದಲ್ಲಿ ಬಿಜೆಪಿಗೆ ಭಾರಿ ಮುಜುಗರ ಉಂಟಾಗಿದೆ. ಪಕ್ಷದ ಉಪಾಧ್ಯಕ್ಷ ಬರ್ನಾರ್ಡ್ ಎನ್.ಮಾರಾಕ್ ನಡೆಸುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು 5 ಅಪ್ರಾಪ್ತರನ್ನು ರಕ್ಷಿಸಿ, 73 ಮಂದಿಯನ್ನು ಬಂಧಿಸಿದ್ದಾರೆ. ಇದು ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದೆ. ಇದೊಂದು ರಾಜಕೀಯಪ್ರೇರಿತ ದಾಳಿ ಎಂದು ಬಿಜೆಪಿ ನಾಯಕ ಆರೋಪವನ್ನು ಅಲ್ಲಗಳೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಹಿರಿಯ ಅಧಿಕಾರಿಗಳ ನೇತೃತ್ವದ ಪೊಲೀಸ್ ಪಡೆ ಪಶ್ಚಿಮ ಗರೋ ಹಿಲ್ಸ್ ಜಿಲ್ಲೆಯ ಮಾರಾಕ್ ಮಾಲೀಕತ್ವದ ರಿಂಪು ಬಗಾನ್ ಎಂಬ ಫಾರ್ಮ್‌ಹೌಸ್ ಮೇಲೆ ದಾಳಿ ಮಾಡಿದೆ. ಈ ಸಂದರ್ಭದಲ್ಲಿ ಸತತ 8 ಗಂಟೆಗಳ ಕಾಲ ಕಾರ್ಯಾಚರಣೆ ನಡೆದಿದೆ ಎಂಬ ಮಾಹಿತಿ ದೊರೆತಿದೆ.
5 ಮಕ್ಕಳ ರಕ್ಷಣೆ: 30 ಕೊಠಡಿಗಳುಳ್ಳ ಬೃಹತ್ ಬಂಗಲೆಯಲ್ಲಿ ಬಂಧಿಯಾಗಿದ್ದ 4 ಬಾಲಕರು, ಓರ್ವ ಬಾಲಕಿಯನ್ನು ಪೊಲೀಸರ ರಕ್ಷಿಸಿದ್ದಾರೆ. ಅಪ್ರಾಪ್ತರನ್ನು ಸುರಕ್ಷಿತವಾಗಿ ಕರೆತಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಈ ಸ್ಥಳದಲ್ಲಿ ಅಪ್ರಾಪ್ತರ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ವಿವೇಕಾನಂದ್ ಸಿಂಗ್ ಹೇಳಿದ್ದಾರೆ.
ಮದ್ಯ, ಮಾನಿನಿಯರ ಗುಂಪು: ಬಂಗಲೆಯಲ್ಲಿನ ಕೊಠಡಿಗಳು, ವಾಹನಗಳ ಒಳಗೆ ಯುವಕ- ಯುವತಿಯರು ಮದ್ಯಪಾನ ಮಾಡುತ್ತಿರುವುದು ಕಂಡುಬಂದಿದೆ. ಅಲ್ಲದೇ ಕೆಲವರು ನಗ್ನರಾಗಿದ್ದರೆ, ಇನ್ನು ಕೆಲವರು ಅರೆಬೆತ್ತಲಾಗಿದ್ದರು. ಈ ರೀತಿಯ 68 ಮಂದಿ, ಮ್ಯಾನೇಜರ್, ಕೇರ್‌ಟೇಕರ್ ಮತ್ತು ಇತರ ಮೂವರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಕೆಲವರು ಕತ್ತಲಲ್ಲಿ ಮದ್ಯದ ಬಾಟಲಿಯನ್ನು ಒಡೆದು ಹಾಕಿ ಓಡಿ ಹೋಗಿದ್ದಾರೆ.
ಸ್ಥಳದಲ್ಲಿ 36 ವಾಹನಗಳು, 47 ಮೊಬೈಲ್ ಫೋನ್‌ಗಳು, ಭಾರಿ ಪ್ರಮಾಣದ ಮದ್ಯ, 500 ಬಳಕೆಯಾಗದ ಕಾಂಡೋಮ್‌ಗಳು, ಇನ್ನಿತರೆ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವೇಶ್ಯಾವಾಟಿಕೆ ಉದ್ದೇಶಕ್ಕಾಗಿ ರಿಂಪು ಬಗಾನ್ ಬಂಗಲೆಯನ್ನು ಮಾರಾಕ್ ಮತ್ತು ಆತನ ಸಹಚರರು 'ವೇಶ್ಯಾಗೃಹ'ವಾಗಿ ಬಳಸುತ್ತಿದ್ದರು ಎಂದು ಹೇಳಲಾಗಿದೆ.
ಸಿಎಂ ಸಂಗ್ಮಾ ವಿರುದ್ಧ ಟೀಕೆ: ದಾಳಿಯ ಬಳಿಕ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಆರೋಪಿ ಹಾಗು ಬಿಜೆಪಿ ನಾಯಕ ಮಾರಾಕ್, ದಕ್ಷಿಣ ತುರಾ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸುತ್ತಿರುವುದರ ವಿರುದ್ಧವಾಗಿ ಈ ದಾಳಿಯನ್ನು ರೂಪಿಸಲಾಗಿದೆ. ನನ್ನ ಫಾರ್ಮ್‌ಹೌಸ್‌ನಲ್ಲಿ ನಡೆದ ದಾಳಿಯು ಇಮೇಜ್‌ಗೆ ಧಕ್ಕೆ ತರಲು ಮತ್ತು ರಾಜಕೀಯ ಸೇಡಿನಿಂದ ಕೂಡಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ರಸ್ತೆಯಲ್ಲಿ ಸಿಕ್ಕ 45 ಲಕ್ಷ ಹಣದ ಬ್ಯಾಗ್ ಠಾಣೆಗೆ ತಂದೊಪ್ಪಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್ ಕಾನ್ಸ್‌ಟೇಬಲ್!