ಹೈದರಾಬಾದ್: ಕೊರೊನಾ ವೈರಸ್ ಯುವಕರು, ವೃದ್ಧರು ಎಂದು ನೋಡದೇ ಎಲ್ಲರನ್ನೂ ಬಿಡದೇ ಕಾಡುತ್ತಿದೆ. ಕೊರೊನಾ ಮೊದಲ ಅಲೆ ವಯಸ್ಸಾದವರನ್ನೇ ಹೆಚ್ಚು ಬಾಧಿಸಿತ್ತು ಆದರೆ, 2ನೇ ಅಲೆ ಎಲ್ಲ ವಯೋಮಾನದವರನ್ನು ಸಂಕಷ್ಟಕ್ಕೆ ದೂಡಿದೆ.
ಕೊರೊನಾ ಸೋಂಕು ತಗುಲಿದ ನಂತರ ಕೆಲವು ಯುವಕರು ಬದುಕಿನ ಬಗೆಗೆನ ಭರವಸೆಯನ್ನೇ ಕಳೆದುಕೊಂಡಿದ್ದಾರೆ. ಆದರೆ, ಈ ಮಧ್ಯೆ ಅದೆಷ್ಟೋ ಹಿರಿಜೀವಗಳು ಕೊರೊನಾದೊಂದಿಗೆ ಸೆಣಸಾಟ ಮುಂದುವರಿಸಿವೆ. ಕೋವಿಡ್ -19 ಅನ್ನು ಸೋಲಿಸಿ ಜೀವನದ ಹೊಸ ಇನ್ನಿಂಗ್ಸ್ ಪ್ರಾರಂಭಿಸಿದ ಛತ್ತೀಸ್ಗಢ ಮತ್ತು ಮಧ್ಯಪ್ರದೇಶದ ಅಜ್ಜ - ಅಜ್ಜಿಯಂತೆಯೇ, ಮಹಾರಾಷ್ಟ್ರದ 60 ವರ್ಷದ ವೃದ್ಧರೊಬ್ಬರು ಸಹ ಆರು ತಿಂಗಳಲ್ಲಿ ಎರಡು ಬಾರಿ ಕೋವಿಡ್ -19 ಸೋಂಕಿಗೆ ಒಳಗಾದರೂ ವೈರಸ್ನಿಂದ ಗೆದ್ದು ಜೀವನದ ಮತ್ತೊಂದು ಅಧ್ಯಯನ ಆರಂಭಿಸಿದ್ದಾರೆ.
ಕೊರೊನಾ ಗೆದ್ದ 96 ವರ್ಷದ ಉಜ್ಜಯಿನಿಯ ಶಾಂತಿಬಾಯಿ:
ಮಧ್ಯಪ್ರದೇಶದ ಉಜ್ಜಯಿನಿಯ 96 ವರ್ಷದ ಶಾಂತಿಬಾಯಿ ದುಬೆ ಇಂದೋರ್ನ ಆಸ್ಪತ್ರೆಗೆ ಏ. 8ರಂದು ದಾಖಲಾದಾಗ ಅವರಿಗೆ ಕೊರೊನಾ ಸೋಂಕು ತಗುಲಿದ್ದು ದೃಢಪಟ್ಟಿತ್ತು. ಅವರ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು. ಆದರೂ ಶಾಂತಿಬಾಯಿ ಎದೆಗುಂದಲಿಲ್ಲ, ವೈರಸ್ನೊಂದಿಗೆ ಸೆಣಸಾಡಿ ಗೆದ್ದು, ಇದೀಗ ತಮ್ಮ ಜನ್ಮದಿನದಂದೇ ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದು, ಹುಟ್ಟಿದ ದಿನವೇ ಅವರಿಗೆ ಮರುಹುಟ್ಟು ಸಿಕ್ಕಂತಾಗಿದೆ.
6 ತಿಂಗಳಲ್ಲಿ ಎರಡು ಬಾರಿ ಕೊರೊನಾ ಗೆದ್ದ 90 ರ ಅಜ್ಜ:
ಪಾಂಡುರಂಗ ಆತ್ಮರಾಮ್ ಮಹಾರಾಷ್ಟ್ರದ ಬೀಡ್ ಜಿಲ್ಲೆಯವರಾಗಿದ್ದು, ಕೊರೊನಾ ವಿರುದ್ಧ 2 ಬಾರಿ ಯುದ್ಧ ಮಾಡಿ ಗೆದ್ದಿದ್ದಾರೆ. ಅವರಿಗೆ 2020ರ ನವೆಂಬರ್ 1 ರಂದು ಕೊರೊನಾ ಸೋಂಕು ತಗುಲಿದ್ದು ಪತ್ತೆಯಾಗಿದ್ದು, ನಂತರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ರು. ಆದರೆ, ಪುನಃ ಇದೇ ಏಪ್ರಿಲ್ 3 ರಂದು ಮತ್ತೆ ಕೊರೊನಾ ಸೋಂಕು ತಗುಲಿದ್ದು, ಇದೀಗ ಚಿಕಿತ್ಸೆ ಪಡೆದು ಈ ಬಾರಿಯೂ ಕೊರೊನಾ ಸೋಲಿಸಿ ತಾವೇ ಗೆದ್ದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು , ನಾವು ಭರವಸೆ ಕಳೆದುಕೊಳ್ಳದಿದ್ದರೆ ಮಾತ್ರ ಕೊರೊನಾ ವಿರುದ್ಧ ಗೆಲುವು ಸಾಧಿಸಬಹುದು ಅಂತಾರೆ.
ಕೊರೊನಾ ಸೋಲಿಸಿದ 76 ವರ್ಷದ ಯಾಸ್ಮಿನ್:
76 ವರ್ಷ ವಯಸ್ಸಿನ ಯಾಸ್ಮಿನ್ ರೆಹಮಾನ್ ಕಚಂದೂರ್ ನಿವಾಸಿಯಾಗಿದ್ದು, ಕೋವಿಡ್ 19 ಎಂಬ ಮಾರಕ ವೈರಸ್ ವಿರುದ್ಧ ಹೋರಾಡಿ ಪ್ರಾಣ ಉಳಿಸಿಕೊಂಡಿದ್ದಾರೆ.
ಕೊರೊನಾ ಸೋಲಿಸಿದ 76 ವರ್ಷದ ಕಸ್ತೂರಿ:
ಛತ್ತೀಸ್ಗಢದ 76 ವರ್ಷದ ಕಸ್ತೂರಿ ಬಾಯಿ ಸಾಹುಗರ ಕೊರೊನಾ ಸೋಂಕು ತಗುಲಿತ್ತು. ಬದುಕುಳಿಯುವ ಯಾವ ಲಕ್ಷಣಗಳೂ ಇರಲಿಲ್ಲ. ಆದರೆ ಅವರಿಗೆ ಬದುಕುವ ಮನೋಸ್ಥೈರ್ಯ ಹೆಚ್ಚಾಗಿದ್ದರಿಂದ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿ ಕೊರೊನಾವನ್ನು ಹೊಡೆದೋಡಿಸಿದ್ದಾರೆ.