ಲಖನೌ( ಉತ್ತರಪ್ರದೇಶ): ಸೇನಾಪಡೆಗಳಲ್ಲಿನ ನೇಮಕಾತಿಗಾಗಿ ಕೇಂದ್ರ ಸರ್ಕಾರ ಮೊನ್ನೆ ಘೋಷಿಸಿರುವ ಅಗ್ನಿಪಥ ಯೋಜನೆಯು ಗ್ರಾಮೀಣ ಯುವ ಸಮುದಾಯದ ವಿರೋಧಿಯಾಗಿದೆ ಎಂದು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಜರಿದಿದ್ದಾರೆ.
ಆರ್ಮಿ ನೇಮಕಾತಿಗಳನ್ನು ದೀರ್ಘಾವಧಿಯಿಂದ ಬಾಕಿ ಇಟ್ಟು, ಈಗ ಕೇಂದ್ರ ಸರ್ಕಾರವು 4 ವರ್ಷ ಅವಧಿಗಾಗಿ ನೇಮಕಾತಿ ಮಾಡಿಕೊಳ್ಳುವ ಅಗ್ನಿವೀರ್ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯು ಮೇಲ್ನೋಟಕ್ಕೆ ಆಕರ್ಷಕವಾಗಿ ಕಾಣಿಸಿದರೂ ಇದರ ಬಗ್ಗೆ ದೇಶದ ಯುವಕರು ಆಕ್ರೋಶಗೊಂಡಿದ್ದಾರೆ. ಆರ್ಮಿ ನೇಮಕಾತಿ ಕ್ರಮದ ಬದಲಾವಣೆಯನ್ನು ಯುವಕರು ಬಹಿರಂಗವಾಗಿಯೇ ವಿರೋಧಿಸುತ್ತಿದ್ದಾರೆ ಎಂದು ಮಾಯಾವತಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಸರ್ಕಾರವು ಸೈನಿಕರ ಸೇವಾ ಅವಧಿಯನ್ನು ಉದ್ದೇಶಪೂರ್ವಕವಾಗಿ ನಾಲ್ಕು ವರ್ಷಗಳಿಗೆ ಸೀಮಿತಗೊಳಿಸುತ್ತಿದೆ. ಈ ಮೂಲಕ ಸೈನಿಕರಿಗೆ ನೀಡಲಾಗುವ ಪಿಂಚಣಿ ಸೌಲಭ್ಯ ನಿರಾಕರಿಸಲಾಗುತ್ತದೆ. ಇದು ಸಂಪೂರ್ಣ ಅನ್ಯಾಯದಿಂದ ಕೂಡಿದ್ದು, ಭವಿಷ್ಯದಲ್ಲಿ ದೇಶದ ಯುವಕರು ಹಾಗೂ ಅವರ ಕುಟುಂಬದವರಿಗೆ ಮಾರಕವಾಗಿ ಪರಿಣಮಿಸಲಿದೆ ಎಂದು ಮಾಯಾವತಿ ಟ್ವೀಟ್ಗಳ ಸರಣಿಯಲ್ಲಿ ಆರೋಪಿಸಿದ್ದಾರೆ.
ದೇಶದ ಜನತೆ ಈಗಾಗಲೇ ಬಡತನ ಹಾಗೂ ಬೆಲೆಯೇರಿಕೆಗಳಿಂದ ಬಳಲುತ್ತಿದ್ದು, ಅವರ ನೋವನ್ನು ಇದರಿಂದ ಮತ್ತಷ್ಟು ಹೆಚ್ಚಿಸಿದಂತಾಗುತ್ತದೆ. ಕೇಂದ್ರ ಸರ್ಕಾರವು ತಕ್ಷಣವೇ ಈ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಮರುಪರಿಶೀಲಿಸಬೇಕು ಎಂದು ಉತ್ತರ ಪ್ರದೇಶ ಮಾಜಿ ಸಿಎಂ ಮಾಯಾವತಿ ಬಲವಾಗಿ ಆಗ್ರಹಿಸಿದ್ದಾರೆ.
ಅಗ್ನಿವೀರ್ ವಿರೋಧಿಸಿ ಪ್ರತಿಭಟನೆ: ಅಗ್ನಿವೀರ್ ಯೋಜನೆ ಘೋಷಣೆಯ ನಂತರ ಸೇನಾಪಡೆ ಸೇರಬೇಕೆಂಬ ಆಕಾಂಕ್ಷಿಗಳು ದೇಶದ ಕೆಲವೆಡೆ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಬುಧವಾರದಂದು ಬಿಹಾರ ರಾಜ್ಯದ ಬಕ್ಸಾರ್ನಲ್ಲಿ ನೂರಾರು ಯುವಕರು ರೈಲು ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ರಾಜಸ್ಥಾನದ ಕೆಲವೆಡೆ ಸಹ ಅಗ್ನಿವೀರ್ ಯೋಜನೆ ವಿರೋಧಿಸಿ ಪ್ರತಿಭಟನೆಗಳು ನಡೆದ ಬಗ್ಗೆ ವರದಿಯಾಗಿದೆ.