ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ ಸ್ವಿಫ್ಟ್‌ನ ನವೀಕರಿಸಿದ ಆವೃತ್ತಿಯನ್ನು ಬುಧವಾರ ಬಿಡುಗಡೆ ಮಾಡಿದೆ. ನವದೆಹಲಿಯಲ್ಲಿ ಆರಂಭಿಕ ಬೆಲೆ 5.73 ಲಕ್ಷದಿಂದ 8.41 ಲಕ್ಷ ರೂ.ಗಳನ್ನ ನಿಗದಿ ಮಾಡಲಾಗಿದೆ.
ಗ್ರಾಹಕರಿಗೆ ತಾಜಾತನ ಮತ್ತು ತಂತ್ರಜ್ಞಾನದ ಅಗತ್ಯತೆಗಳೊಂದಿಗೆ ಹೊಂದಿಕೊಳ್ಳುವ ಹೊಸ ಸ್ವಿಫ್ಟ್ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಎಂಎಸ್‌ಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. "2005 ರಲ್ಲಿ ಈ ಮಾಡಲ್ ಕಾರು ತಯಾರಿಕೆ ಪ್ರಾರಂಭವಾದಾಗಿನಿಂದ, ಸ್ವಿಫ್ಟ್ ಭಾರತದಲ್ಲಿ ಕ್ರಾಂತಿಯುಂಟು ಮಾಡಿದೆ. ಹೀಗಾಗಿ ಜನರ ಅಭಿರುಚಿ ಹಾಗೂ ಅಗತ್ಯತೆಗೆ ತಕ್ಕಂತೆ ಮಾರ್ಪಾಡು ಮಾಡಲಾಗಿದೆ ಎಂದು ಎಂಎಸ್‌ಐ ಕಾರ್ಯನಿರ್ವಾಹಕ ನಿರ್ದೇಶಕ (ಮಾರ್ಕೆಟಿಂಗ್ ಮತ್ತು ಸೇಲ್ಸ್) ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ. ಈ ಮಾದರಿ ಕಾರು ಬಿಡುಗಡೆಗೊಂಡ ವರ್ಷಗಳಲ್ಲಿ ಮಾರುತಿ ಸುಮಾರು 24 ಲಕ್ಷ ಗ್ರಾಹಕರನ್ನ ಗಳಿಸಿದೆ" ಎಂದು ಶ್ರೀವಾಸ್ತವ್ ಇದೇ ವೇಳೆ ಕಂಪನಿ ಸಾಧನೆಯನ್ನ ಜನರ ಮುಂದೆ ತೆರೆದಿಟ್ಟಿದ್ದಾರೆ.
ಹೊಸ ಸ್ವಿಫ್ಟ್ ಶಕ್ತಿಯುತ ಕೆ-ಸರಣಿ ಎಂಜಿನ್, ಸ್ಪೋರ್ಟಿಯರ್ ಡ್ಯುಯಲ್ ಟೋನ್ ಹೊರಭಾಗ, ಉತ್ತಮ-ದರ್ಜೆಯ ಇಂಧನ ದಕ್ಷತೆ ಮತ್ತು ವರ್ಧಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ತಯಾರಾಗಿದೆ ಎಂದು ಎಂಎಸ್‌ಐ ಕಾರ್ಯನಿರ್ವಾಹಕ ನಿರ್ದೇಶಕರು ಹೇಳಿದ್ದಾರೆ.
ಇದು ಮ್ಯಾನುಯಲ್ ಮತ್ತು ಸ್ವಯಂಚಾಲಿತ ಗೇರ್ಗಳನ್ನು ಹೊಂದಿದೆ. ಮ್ಯಾನುವಲ್ ಟ್ರಿಮ್‌ಗಳ ಬೆಲೆ 5.73 ಲಕ್ಷದಿಂದ 7.91 ಲಕ್ಷ ರೂ.ಗಳಷ್ಟಿದ್ದರೆ, ಎಜಿಎಸ್ ಮಾದರಿ ಕಾರುಗಳ ಬೆಲೆ 6.86 ಲಕ್ಷದಿಂದ 8.41 ಲಕ್ಷ ರೂ.ವರೆಗೆ ಇರಲಿದೆ. ಪ್ರತಿ ಲೀಟರ್‌ಗೆ 23.2 ಕಿ.ಮೀ ಇಂಧನ ದಕ್ಷತೆಯೊಂದಿಗೆ ಹೊಸ ಮಾದರಿ ಕಾರ್ ಕಾರ್ಯ ನಿರ್ವಹಿಸಲಿದೆ.