ಗಡ್ಚಿರೋಲಿ (ಮಹಾರಾಷ್ಟ್ರ): ಮಾವೋವಾದಿ ನಾಯಕ ಮಿಲಿಂದ್ ತೇಲ್ತುಂಬ್ಡೆ ಹತ್ಯೆಗೆ ಪ್ರತಿಕಾರ (Revenge For Teltumbde's Death) ತೀರಿಸಿಕೊಳ್ಳುವುದಾಗಿ ನಕ್ಸಲರು ಹೇಳಿದ್ದು, ನವೆಂಬರ್ 27 ರಂದು ಆರು ರಾಜ್ಯಗಳಲ್ಲಿ ಬಂದ್‌ಗೆ ಕರೆ (Maoists call for bandh) ನೀಡಿದ್ದಾರೆ.
ನವೆಂಬರ್ 13ರಂದು ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಗ್ಯಾರಪಟ್ಟಿ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪೊಲೀಸ್ ದಳ ನಡೆಸಿದ್ದ ಎನ್ಕೌಂಟರ್ನಲ್ಲಿ ಮೋಸ್ಟ್ ವಾಂಟೆಡ್ ಮಾವೋವಾದಿ ನಾಯಕ ಮಿಲಿಂದ್ ತೇಲ್ತುಂಬ್ಡೆ ಸೇರಿ 27 ಮಂದಿ ನಕ್ಸಲರನ್ನು (27 naxals killed in Gadchiroli Encounter) ಹೊಡೆದುರುಳಿಸಲಾಗಿತ್ತು.
ಇದೊಂದು ನಕಲಿ ಎನ್‌ಕೌಂಟರ್ ಎಂದು ಆರೋಪಿಸಿರುವ ನಕ್ಸಲ್ ಮುಖಂಡರು ಈ ಸಂಬಂಧ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದರು. ಇದೀಗ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಿಪಿಐ (ಮಾವೋವಾದಿ) ಕೇಂದ್ರ ವಕ್ತಾರ ಅಭಯ್, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಢ, ಒಡಿಶಾ, ತೆಲಂಗಾಣ ಮತ್ತು ಆಂಧ್ರಪ್ರದೇಶ - ಈ ಆರು ರಾಜ್ಯಗಳಲ್ಲಿ ಬಂದ್‌ಗೆ ಕರೆ ನೀಡಿರುವುದಾಗಿ ಹಾಗೂ 27 ಮಾವೋವಾದಿಗಳ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಈ ದಿನ ಅತ್ಯಂತ ದುಃಖಕರವಾಗಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Gadchiroli Encounter: ಈ ಎನ್‌ಕೌಂಟರ್ ನಕಲಿ.. ನ್ಯಾಯಾಂಗ ತನಿಖೆಯಾಗಲಿ - ನಕ್ಸಲರ ಆಗ್ರಹ
ಡಿಸೆಂಬರ್ 2 ರಿಂದ 8 ರವರೆಗೆ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ ಸಪ್ತಾಹವನ್ನು ನಕ್ಸಲರು ಆಚರಿಸಲಿದ್ದಾರೆ. ಹೀಗಾಗಿ ಈಗಿನಿಂದ, ವಿಶೇಷವಾಗಿ ನವೆಂಬರ್ 27 ರ ಬಂದ್ ಬಳಿಕ ಮಾವೋವಾದಿಗಳು ಹಲವಾರು ಹಿಂಸಾಚಾರಗಳನ್ನು ನಡೆಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ.