ಕೋಟಾ (ರಾಜಸ್ಥಾನ): ರಾಜಸ್ತಾನ ಮೂಲದ ವ್ಯಕ್ತಿಯೊಬ್ಬರು ರೈಲ್ವೆ ಇಲಾಖೆಯಿಂದ 35 ರೂಪಾಯಿ ಮರುಪಾವತಿ ಪಡೆಯುವ ಸಲುವಾಗಿ 5 ವರ್ಷಗಳ ಕಾಲ ನಿರಂತರ ಹೋರಾಟ ಮಾಡಿ, ಕೊನೆಗೂ ಇಲಾಖೆಯಿಂದ ಹಣ ವಾಪಸ್ ಪಡೆದಿದ್ದಾರೆ. ಇದಲ್ಲದೇ, ಇದೇ ರೀತಿಯಾಗಿ ಹಣ ಪಡೆಯಬೇಕಿದ್ದ 3 ಲಕ್ಷ ಜನರಿಗೆ ಹಣ ಸಂದಾಯವಾಗುವಂತೆ ಮಾಡಿದ್ದಾರೆ.
ರಾಜಸ್ಥಾನದ ಕೋಟಾ ಮೂಲದ ಇಂಜಿನಿಯರ್ ಆಗಿರುವ ಸುಜೀತ್ ಸ್ವಾಮಿ(30) ರೈಲ್ವೆ ಇಲಾಖೆಯ ವಿರುದ್ಧ 5 ವರ್ಷ ಹೋರಾಡಿದವರು. 2017 ಜುಲೈ 2 ರಂದು ಸುಜೀತ್ ಸ್ವಾಮಿ ಅವರು ಗೋಲ್ಡನ್ ಟೆಂಪಲ್ ಮೇಲ್‌ನಲ್ಲಿ ರಾಜಸ್ಥಾನದಿಂದ ನವದೆಹಲಿಗೆ ರೈಲ್ವೆ ಟಿಕೆಟ್ ಕಾಯ್ದಿರಿಸಿದ್ದರು. ಇದಕ್ಕಾಗಿ ಅವರು 765 ರೂಪಾಯಿ ಪಾವತಿಸಿದ್ದರು.
ಕಾರಣಾಂತರದಿಂದ ರೈಲ್ವೆ ಪ್ರಯಾಣ ಮೊಟಕುಗೊಳಿಸಿ ಟಿಕೆಟ್ ರದ್ದು ಮಾಡಿದ್ದರು. ಈ ವೇಳೆ, ರೈಲ್ವೆ ಇಲಾಖೆ 65 ರೂಪಾಯಿ ಸೇವಾ ಶುಲ್ಕ ಬದಲಾಗಿ 100 ರೂಪಾಯಿ ಕಡಿತಗೊಳಿಸಿ 665 ರೂ. ವಾಪಸ್ ಸಂದಾಯ ಮಾಡಿತ್ತು. ತಮ್ಮಿಂದ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಮನವಿ ಮಾಡಿದ ಸುಜೀತ್ಗೆ ಸರಕು ಮತ್ತು ಸೇವಾ ತೆರಿಗೆಯಾಗಿ (ಜಿಎಸ್‌ಟಿ) ಹೆಚ್ಚುವರಿಯಾಗಿ 35 ರೂ. ಕಡಿತಗೊಳಿಸಲಾಗಿದೆ ಎಂದು ಮಾಹಿತಿ ಬಂದಿತ್ತು.
ರೈಲ್ವೆಗೇ ಪತ್ರ ಬರೆದ ಸುಜೀತ್: ತಾವು ಟಿಕೆಟ್ ಬುಕ್ ಮಾಡಿದಾಗ ಜಿಎಸ್‌ಟಿ ಜಾರಿಯಾಗದಿದ್ದರೂ, ಅದರ ತೆರಿಗೆಯನ್ನು ವಿಧಿಸಿದ್ದರ ವಿರುದ್ಧ ಸುಜೀತ್ ರೈಲ್ವೆ ಮತ್ತು ಹಣಕಾಸು ಇಲಾಖೆಗೆ ಆರ್ಟಿಐ ಅರ್ಜಿ ಸಲ್ಲಿಸಿದ್ದ. ಇದಕ್ಕೆ ಉತ್ತರಿಸಿದ ಆರ್ಟಿಐ, ಐಆರ್ಸಿಟಿಸಿಯ ರೈಲ್ವೇ ಸಚಿವಾಲಯದ ವಾಣಿಜ್ಯ ಸುತ್ತೋಲೆ ಸಂಖ್ಯೆ 43 ಅನ್ನು ಉಲ್ಲೇಖಿಸಿ, ಜಿಎಸ್‌ಟಿ ಅನುಷ್ಠಾನದ ಮೊದಲು ಬುಕ್ ಮಾಡಿದ ಮತ್ತು ಅನುಷ್ಠಾನದ ನಂತರ ರದ್ದುಗೊಳಿಸಿದ ಟಿಕೆಟ್‌ಗಳಿಗೆ, ಬುಕಿಂಗ್ ಸಮಯದಲ್ಲಿ ವಿಧಿಸಲಾದ ಸೇವಾ ತೆರಿಗೆಯನ್ನು ಮರುಪಾವತಿಸಲಾಗುವುದಿಲ್ಲ. ಆದ್ದರಿಂದ, ರದ್ದುಪಡಿಸಿದ ಟಿಕೆಟ್‌ಗೆ 100 (65 ರೂ. ಜೊತೆಗೆ ಸೇವಾ ತೆರಿಗೆಯಾಗಿ 35 ರೂ) ವಿಧಿಸಲಾಗಿದೆ ಎಂದು ಉತ್ತರ ಬಂದಿತ್ತು.
ತಾವು ಟಿಕೆಟ್ ಬುಕ್ ಮಾಡಿದಾಗ ಜಿಎಸ್‌ಟಿ ಜಾರಿಯಾಗಿರಲಿಲ್ಲ. ಇದಕ್ಕಾಗಿ ತಮಗೆ ಹಣವನ್ನು ವಾಪಸ್ ಸಂದಾಯ ಮಾಡಬೇಕು ಎಂದು ರೈಲ್ವೆ ಇಲಾಖೆಗೆ 50 ಬಾರಿ ಪತ್ರ ಬರೆದಿದ್ದಾರೆ. ಇದಲ್ಲದೇ ಹಣಕಾಸು ಇಲಾಖೆ ಸೇರಿ 4 ಸಚಿವಾಲಯಗಳಿಗೂ ಪತ್ರ ರವಾನಿಸಿದ್ದಾರೆ.
2 ರೂಪಾಯಿಗಾಗಿ 3 ವರ್ಷ ಹೋರಾಟ: ಸುಜೀತ್ ಅವರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತೆ ಜುಲೈ 1, 2017 ರ ಮೊದಲು ಬುಕ್ ಮಾಡಲಾದ ಮತ್ತು ರದ್ದುಗೊಳಿಸಲಾದ ಟಿಕೆಟ್‌ಗಳಿಗೆ ಬುಕಿಂಗ್ ಸಮಯದಲ್ಲಿ ವಿಧಿಸಲಾದ ಸೇವಾ ತೆರಿಗೆಯ ಒಟ್ಟು ಮೊತ್ತವನ್ನು ಮರುಪಾವತಿಸಲಾಗುವುದು ಎಂದು ರೈಲ್ವೆ ಇಲಾಖೆ ಒಪ್ಪಿಕೊಂಡಿದೆ.
ಮೇ 1, 2019 ರಂದು ಸುಜೀತ್ ಅವರು ರೈಲ್ವೆಯಿಂದ ಬರಬೇಕಾಗಿದ್ದ 35 ಬದಲಾಗಿ 33 ರೂಪಾಯಿ ಹಣವನ್ನು ತಮ್ಮ ಬ್ಯಾಂಕ್ ಖಾತೆ ಸೇರಿತ್ತು. ಇದರ ವಿರುದ್ಧವೂ ಹೋರಾಟ ಮಾಡಿದ ಸುಜೀತ್ ತಮಗೆ ಇನ್ನೂ 2 ರೂಪಾಯಿ ಬರಬೇಕು ಎಂದು ಇಲಾಖೆಯ ದುಂಬಾಲು ಬಿದ್ದಿದ್ದ. ಕೊನೆಗೂ ಮಣಿದ ರೈಲ್ವೆ ಕಳೆದ ಶುಕ್ರವಾರ (ಮೇ 23) ರಂದು ಉಳಿದ 2 ರೂಪಾಯಿಯನ್ನು ಮರಳಿ ನೀಡಿದೆ.
ಇದಲ್ಲದೇ, ಈ ರೀತಿಯಾಗಿ ಹಣ ವಾಪಸ್ ಹೋಗಬೇಕಿದ್ದ 2.98 ಲಕ್ಷ ಜನರಿಗೂ ಹಣವನ್ನು ವಾಪಸ್ ಸಂದಾಯ ಮಾಡಲು ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ಹೆಚ್ಚುವರಿಯಾಗಿ ಕಡಿತವಾಗಿದ್ದ 35 ರೂಪಾಯಿಗಾಗಿ ಸುಜೀತ್ 5 ವರ್ಷ ಹೋರಾಡಿದ್ದಲ್ಲದೇ, 2.98 ಲಕ್ಷ ಜನರಿಗೂ ಹಣ ಸಿಗುವಂತೆ ಮಾಡಿದ್ದಾರೆ.
ಓದಿ: ಜೀವಂತ ಹಾವುಗಳನ್ನು ಹಾರದಂತೆ ಬದಲಿಸಿಕೊಂಡ ವಧು, ವರ -ವಿಡಿಯೋ ವೈರಲ್