ನವದೆಹಲಿ: ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಡಾ.ಮನಮೋಹನ್ ಸಿಂಗ್ ಅವರಿಗೆ ಸಭಾಪತಿ ಎಂ. ವೆಂಕಯ್ಯ ನಾಯ್ಡು ರಜೆ ಮಂಜೂರು ಮಾಡಿದ್ದಾರೆ. ಮಾಜಿ ಪ್ರಧಾನಿ ಅವರಿಗೆ ಅನಾರೋಗ್ಯದ ಕಾರಣದಿಂದ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಗೈರುಹಾಜರಾಗಲು ಅವಕಾಶ ನೀಡಲಾಗಿದೆ. ರಜೆಯ ಅರ್ಜಿ ಸಭಾಧ್ಯಕ್ಷರ ಟೇಬಲ್‌ಗೆ ಬಂದ ಬಳಿಕ ವೆಂಕಯ್ಯ ನಾಯ್ಡು ಅವರು ರಜೆಯ ಘೋಷಣೆ ಮಾಡಿದರು.
ಅನಾರೋಗ್ಯದ ಕಾರಣದಿಂದ ಚಳಿಗಾಲದ ಸಭೆಗಳಿಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಡಾ. ಮನಮೋಹನ್ ಸಿಂಗ್ ಅವರಿಂದ ನಮಗೆ ಪತ್ರ ಬಂದಿದೆ. ನಾವು ಅದಕ್ಕೆ ಅವಕಾಶ ನೀಡುತ್ತೇವೆ. ನವೆಂಬರ್ 29 ರಿಂದ ಡಿಸೆಂಬರ್ 23 ರವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನ ಹಾಗೂ ಎಲ್ಲ ಸಭೆಗಳಿಗೆ ರಜೆ ನೀಡುತ್ತೇವೆ ಎಂದು ವೆಂಕಯ್ಯ ನಾಯ್ಡು ಹೇಳಿದರು.
89 ವರ್ಷದ ಮನಮೋಹನ್ ಸಿಂಗ್ ಅವರಿಗೆ ಕೆಲವು ದಿನಗಳಿಂದ ಆರೋಗ್ಯ ಸರಿಯಿಲ್ಲ. ಕಳೆದ ಅಕ್ಟೋಬರ್‌ನಲ್ಲಿ ಹೃದಯ ಸಮಸ್ಯೆಯಿಂದ ದೆಹಲಿಯ ಏಮ್ಸ್‌ಗೆ ದಾಖಲಾಗಿದ್ದರು. ಈ ಹಿಂದೆ ಹಲವು ಬಾರಿ ಸಿಂಗ್ ಬೈಪಾಸ್ ಸರ್ಜರಿಗೂ ಒಳಗಾಗಿದ್ದರು.
ಇದನ್ನೂ ಓದಿ: ಮೃತಪಟ್ಟ ರೈತರ ದಾಖಲೆ ಇಲ್ಲದ ವಿಚಾರ: ರಾಜ್ಯಸಭೆಯಲ್ಲಿ ವಿಪಕ್ಷಗಳ ಪ್ರತಿಭಟನೆ