ನವದೆಹಲಿ: ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಜೈಲು ಸೇರಿರುವ ದೆಹಲಿಯ ಮಾಜಿ ಉಪಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ತಮ್ಮ ಪತ್ನಿಯನ್ನು ಭೇಟಿಯಾಗಲು ಶುಕ್ರವಾರ ರೋಸ್ ಅವೆನ್ಯೂ ಕೋರ್ಟ್ ಅನುಮತಿ ನೀಡಿದೆ. ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯನ್ನು ಭೇಟಿ ಮಾಡಲು ಸಿಸೋಡಿಯಾ ಐದು ದಿನಗಳ ಕಾಲ ಅನುಮತಿ ಕೋರಿದ್ದರು. ಆದರೆ, ಶನಿವಾರ ಒಂದು ದಿನ ಪತ್ನಿಯ ಭೇಟಿಯಾಗಲು ಕೋರ್ಟ್ ಒಪ್ಪಿಗೆ ಸೂಚಿಸಿದೆ.
ದೆಹಲಿ ಸರ್ಕಾರದ ರದ್ದಗೊಂಡಿರುವ ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪವನ್ನು ಮನೀಶ್ ಸಿಸೋಡಿಯಾ ಎದುರಿಸಿದ್ದಾರೆ. ಸಿಬಿಐ ಹಾಗೂ ಜಾರಿ ನಿರ್ದೇಶನಾಲಯವು ಪ್ರತ್ಯೇಕ ನಡೆಸುತ್ತಿದೆ. ಸಿಸೋಡಿಯಾ ಅವರನ್ನು ಫೆಬ್ರವರಿ 26ರಂದು ಸಿಬಿಐ ಬಂಧಿಸಿತ್ತು. ಬಳಿಕ ಮಾರ್ಚ್ 9ರಂದು ಇಡಿ ಕೂಡ ವಶಕ್ಕೆ ಪಡೆದಿತ್ತು. ಈ ಪ್ರಕರಣಗಳಲ್ಲಿ ಸಿಸೋಡಿಯಾ ಮತ್ತು ಇತರ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಸದ್ಯ ತಿಹಾರ್ ಜೈಲಿನಲ್ಲಿರುವ ಮನೀಶ್ ಸಿಸೋಡಿಯಾ ಐದು ದಿನಗಳ ಅವಧಿಗೆ ಅನಾರೋಗ್ಯ ಬಳಲುತ್ತಿರುವ ತಮ್ಮ ಪತ್ನಿಯನ್ನು ಭೇಟಿಯಾಗಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಸಿಬಿಐ ಮತ್ತು ಇಡಿ ಸಂಸ್ಥೆಗಳು ಅರ್ಜಿ ವಿರೋಧಿಸಿದ್ದವು. ಆರೋಪಿಯು ಯಾವ ಕಾನೂನು ನಿಬಂಧನೆಗಳ ಅಡಿ ಅನುಮತಿ ಕೋರುತ್ತಿದ್ದಾರೆ?. ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಬೇಕಿತ್ತು ಎಂದು ತನಿಖಾ ಸಂಸ್ಥೆಗಳು ಆಕ್ಷೇಪ ಸಲ್ಲಿಸಿದ್ದವು. ಆದರೆ, ಈ ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಎಂ.ಕೆ ನಾಗಪಾಲ್ ಅವರು ಸಿಸೋಡಿಯಾ ತಮ್ಮ ಪತ್ನಿಯನ್ನು ತಮ್ಮ ಮನೆಯಲ್ಲಿ ಶನಿವಾರ ಬೆಳಗ್ಗೆ 10 ರಿಂದ 4ರ ನಡುವೆ ಪೊಲೀಸ್ ಸಮ್ಮುಖದಲ್ಲಿ ಭೇಟಿಯಾಗಲು ಅವಕಾಶ ನೀಡಿದ್ದಾರೆ.
ಸಂಜಯ್ ಸಿಂಗ್ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ: ಇದೇ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿತಾಗಿರುವ ರಾಜ್ಯಸಭೆ ಸದಸ್ಯ ಸಂಜಯ್ ಸಿಂಗ್ ಅವರ ನ್ಯಾಯಾಂಗ ಬಂಧನವನ್ನು ನ್ಯಾಯಾಲಯವು ನವೆಂಬರ್ 24ರವರೆಗೆ ವಿಸ್ತರಿಸಿದೆ. ಮಾನನಷ್ಟ ಮೊಕದ್ದಮೆಯಲ್ಲಿ ಪಂಜಾಬ್‌ನ ಅಮೃತಸರದ ಸಿಜೆಎಂ ನ್ಯಾಯಾಲಯದ ಮುಂದೆ ಸಂಜಯ್ ಸಿಂಗ್ ಅವರನ್ನು ಹಾಜರುಪಡಿಸಲು ನವೆಂಬರ್ 18ರಂದು ವಿಶೇಷ ನ್ಯಾಯಾಧೀಶರು ಅನುಮತಿ ನೀಡಿದ್ದರು.
ಆಮ್ ಆದ್ಮಿ ಪಕ್ಷದ ನಾಯಕರಾದ ಸಂಜಯ್ ಸಿಂಗ್ ಅವರ ಆರೋಗ್ಯ ಸಮಸ್ಯೆ ಮತ್ತು ಬದಲಾಗಿರುವ ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ರಾಜಧಾನಿ ರೈಲಿನಲ್ಲಿ ಪಂಜಾಬ್‌ಗೆ ಕರೆದುಕೊಂಡು ಹೋಗಿ ಅದೇ ದಿನ ವಾಪಸ್ ಬರುವಂತೆ ಜೈಲು ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿತ್ತು.
ಇದನ್ನೂ ಓದಿ: ಮನೀಶ್ ಸಿಸೋಡಿಯಾ ಜೈಲು ಸೇರಿ 6 ತಿಂಗಳು: ಶಾಸಕರ ವೇತನಕ್ಕಾಗಿ ಹೊಸ ಬ್ಯಾಂಕ್ ಖಾತೆಗೆ ಕೋರ್ಟ್ ಅನುಮತಿ