ಇಂಫಾಲ (ಮಣಿಪುರ) : ಮಣಿಪುರದಲ್ಲಿ ನಡೆದ ಹಿಂಸಾಚಾರದ ಘಟನೆಗಳ ತನಿಖೆಗಾಗಿ ಕೇಂದ್ರ ಸರ್ಕಾರವು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ. ಹಿಂಸಾಚಾರದಿಂದ ವ್ಯಾಪಕ ಪ್ರಮಾಣದ ಜೀವಹಾನಿ ಮತ್ತು ಆಸ್ತಿಪಾಸ್ತಿಗಳಿಗೆ ಹಾನಿ ಸಂಭವಿಸಿತ್ತು. ರಾಜ್ಯಕ್ಕೆ ತಮ್ಮ ನಾಲ್ಕು ದಿನಗಳ ಭೇಟಿಯನ್ನು ಇಂದು ಮುಕ್ತಾಯಗೊಳಿಸಿದ ಶಾ, ಇಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ವಿಶೇಷ ಕೇಂದ್ರ ತನಿಖಾ ದಳ (ಸಿಬಿಐ) ತಂಡವು ರಾಜ್ಯದಲ್ಲಿನ ಹಿಂಸಾಚಾರ ಪ್ರಕರಣಗಳ ತನಿಖೆ ನಡೆಸಲಿದೆ ಎಂದು ಹೇಳಿದರು.
ಈ ಘಟನೆಗಳ ಬಗ್ಗೆ ತನಿಖೆ ನಡೆಸಲು ಕೇಂದ್ರ ಸರ್ಕಾರವು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಶ್ರೇಣಿಯ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ. ಮಣಿಪುರದ ರಾಜ್ಯಪಾಲರು ನಾಗರಿಕ ಸಮಾಜದ ಸದಸ್ಯರೊಂದಿಗೆ ಶಾಂತಿ ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಹಿಂಸಾಚಾರದ ಕಾರಣಗಳನ್ನು ಪರಿಶೀಲಿಸಲು ಮತ್ತು ಅದಕ್ಕೆ ಕಾರಣರಾದವರನ್ನು ಗುರುತಿಸಲು ತನಿಖಾ ಸಮಿತಿಯನ್ನು ರಚಿಸಲಾಗುವುದು ಎಂದು ಅವರು ಹೇಳಿದರು.
ಯಾವುದೇ ಪಕ್ಷಪಾತ ಮತ್ತು ತಾರತಮ್ಯವಿಲ್ಲದೆ ತನಿಖೆ ನಡೆಸಲಾಗುವುದು ಮತ್ತು ತಪ್ಪಿತಸ್ಥರನ್ನು ಶಿಕ್ಷಿಸಲಾಗುವುದು ಎಂದು ಕೇಂದ್ರ ಸಚಿವರು ಮಣಿಪುರದ ಜನರಿಗೆ ಭರವಸೆ ನೀಡಿದರು. ಹಿಂಸಾತ್ಮಕ ಘಟನೆಗಳ ತನಿಖೆಗಾಗಿ ಮಣಿಪುರದಲ್ಲಿ ಹಲವಾರು ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿವೆ. ಪಿತೂರಿಯ ಸುಳಿವು ಇರುವ ಆರು ಹಿಂಸಾಚಾರದ ಘಟನೆಗಳ ಬಗ್ಗೆ ಉನ್ನತ ಮಟ್ಟದ ಸಿಬಿಐ ತನಿಖೆ ನಡೆಯಲಿದೆ. ತನಿಖೆಯು ನ್ಯಾಯಯುತವಾಗಿದೆ ನಡೆಯುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ನಾಳೆಯಿಂದ ಕೂಂಬಿಂಗ್ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.
ಎಸ್ಓಓ (SoO) ಒಪ್ಪಂದವನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಣಿಪುರದ ನಾಗರಿಕರು ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ಕಾರ್ಯಾಚರಣೆ ಸ್ಥಗಿತಗೊಳಿಸುವ (SoO) ಒಪ್ಪಂದವನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಶಸ್ತ್ರಾಸ್ತ್ರಗಳನ್ನು ಹೊಂದಿರುವವರು ಪೊಲೀಸರ ಮುಂದೆ ಶರಣಾಗಬೇಕು. ನಾಳೆಯಿಂದ ಕೂಂಬಿಂಗ್ ಕಾರ್ಯಾಚರಣೆಗಳು ಪ್ರಾರಂಭವಾಗುತ್ತವೆ ಮತ್ತು ಯಾರೇ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದರೂ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಿಕ್ಷಣಾಧಿಕಾರಿಗಳು ರಾಜ್ಯಕ್ಕೆ ಆಗಮಿಸಿ ವಿದ್ಯಾರ್ಥಿಗಳಿಗೆ ನಿರಂತರ ಶಿಕ್ಷಣ ಸೌಲಭ್ಯ ಕಲ್ಪಿಸುವ ಕುರಿತು ಚರ್ಚೆ ನಡೆಸಲಿದ್ದಾರೆ. ಆನ್‌ಲೈನ್ ಶಿಕ್ಷಣ ಮತ್ತು ಪರೀಕ್ಷೆಯು ಯೋಜನೆಯಂತೆ ನಡೆಯಲಿದೆ. ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಹಿಂದೆ ಬೀಳದಂತೆ ಮತ್ತು ಅಧ್ಯಯನಗಳು ಸುಗಮವಾಗಿ ನಡೆಯುವಂತೆ ಪುನರ್ವಸತಿ ಪ್ಯಾಕೇಜ್ ಮತ್ತು ವಿಶೇಷ ನಿಬಂಧನೆಗಳನ್ನು ಜಾರಿಗೆ ತರಲಾಗುವುದು ಎಂದು ಗೃಹ ಸಚಿವರು ಮಾಹಿತಿ ನೀಡಿದರು.
ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡವರ ಹತ್ತಿರದ ಸಂಬಂಧಿಕರಿಗೆ ಕೇಂದ್ರ ಸರ್ಕಾರದಿಂದ 5 ಲಕ್ಷ ಮತ್ತು ಮಣಿಪುರ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರವಾಗಿ ನೀಡಲಾಗುತ್ತದೆ. ಈ ಮೊತ್ತವನ್ನು DBT ಮೂಲಕ ಸಂತ್ರಸ್ತರಿಗೆ ವರ್ಗಾಯಿಸಲಾಗುವುದು ಎಂದು ಅವರು ಹೇಳಿದರು. ಭಾರತ ಸರ್ಕಾರದ ಪರವಾಗಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪರವಾಗಿ ಮತ್ತು ನನ್ನ ಪರವಾಗಿ ಇತ್ತೀಚಿನ ಹಿಂಸಾಚಾರದಲ್ಲಿ ಮಡಿದ ಎಲ್ಲರಿಗೂ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ಸಚಿವ ಶಾ ನುಡಿದರು.
ಇದನ್ನೂ ಓದಿ : ಭಾರತೀಯ ಕುಟುಂಬಗಳ ಉಳಿತಾಯ ಪ್ರಮಾಣ ಶೇ 7.6ಕ್ಕೆ ಇಳಿಕೆ