ಕೊಲ್ಲಂ(ಕೇರಳ): ಆಸ್ತಿಯ ಆಸೆಯಿಂದಾಗಿ ವಿಷ ಸರ್ಪದಿಂದ ಕಚ್ಚಿಸಿ ಹೆಂಡತಿಯನ್ನು ಭೀಕರವಾಗಿ ಕೊಲೆ ಮಾಡಿದ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯ ಗಂಡನೇ ಅಪರಾಧಿ ಎಂದು ಹೇಳಿದ್ದು, ಎರಡು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಕೊಲ್ಲಂ ಜಿಲ್ಲೆಯ ಹೆಚ್ಚುವರಿ ಸೆಷನ್ಸ್ ಕೋರ್ಟ್ನಿಂದ ಅಪರಾಧಿ ಸೂರಜ್ಗೆ ಈ ಶಿಕ್ಷೆಯನ್ನು ವಿಧಿಸಿದ್ದು, ಐದು ಲಕ್ಷ ರೂಪಾಯಿ ದಂಡವನ್ನು ಕೂಡಾ ವಿಧಿಸಲಾಗಿದೆ. ಒಂದು ವೇಳೆ ದಂಡವನ್ನು ಪಾವತಿಸಲು ವಿಫಲವಾದರೆ ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಮಂಗಳವಾರವಷ್ಟೇ ವ್ಯಕ್ತಿಯನ್ನು ಅಪರಾಧಿ ಎಂದು ಘೋಷಿಸಿದ್ದ ನ್ಯಾಯಾಲಯ ಇದೊಂದು ಅಪರೂಪದಲ್ಲೇ ಅಪರೂಪದ ಪ್ರಕರಣ ಎಂದು ಉಲ್ಲೇಖಿಸಿತ್ತು. ನಾಗಪುರ ಮತ್ತು ಇಂಧೋರ್ನಲ್ಲೂ ಕೂಡಾ ಇಂಥದ್ದೇ ಪ್ರಕರಣಗಳು ವರದಿಯಾಗಿದ್ದವು. ತನಿಖೆಯಲ್ಲಿ ಜೀವಂತ ಹಾವನ್ನು ಕೂಡಾ ಬಳಸಲಾಗಿತ್ತು.
ಏನಿದು ಕೇಸ್..?
ಉತ್ರಾ ಎಂಬಾಕೆಯನ್ನು ವಿವಾಹವಾಗಿದ್ದ ಸೂರಜ್ ಆಕೆಯ ಆಸ್ತಿಯನ್ನು ಕಬಳಿಸುವ ಸಲುವಾಗಿ ಸಂಚು ರೂಪಿಸಿದ್ದನು. ಯಾರಿಗೂ ಅನುಮಾನ ಬಾರದಂತೆ ಆಕೆಯನ್ನು ಹತ್ಯೆ ಮಾಡಲು ಹಾವುಗಳನ್ನು ಬಳಸಿಕೊಂಡಿದ್ದನು.
ಕಳೆದ ವರ್ಷ ಮೇ ತಿಂಗಳಲ್ಲಿ ಸೂರಜ್ ಎಂಬಾತ 10 ಸಾವಿರ ರೂ. ನೀಡಿ ಎರಡು ಹಾವು ಖರೀದಿ ಮಾಡಿ, ಅವುಗಳ ಸಹಾಯದಿಂದ ಹೆಂಡತಿಯನ್ನ ಕಚ್ಚಿಸಿ, ಕೊಲೆ ಮಾಡಿದ್ದನು. ಇದಾದ ಬಳಿಕ ಹಾವು ಕಚ್ಚಿದ್ದರಿಂದ ತನ್ನ ಹೆಂಡತಿ ಸಾವನ್ನಪ್ಪಿದ್ದಾಳೆಂದು ಬಿಂಬಿಸಲು ಯತ್ನಿಸಿದ್ದನು.
ಅನುಮಾನಪಟ್ಟ ಉತ್ರಾ ಪೋಷಕರು ದೂರು ದಾಖಲಿಸಿದ್ದು, ತನಿಖೆ ನಂತರ ಸೂರಜ್ ಆಕೆಯನ್ನು ಕೊಂದಿದ್ದಾಗಿ ತಿಳಿದು ಬಂದಿತ್ತು. ತಾನೇ ಈ ಕೃತ್ಯವೆಸಗಿದ್ದಾಗಿ ಪೊಲೀಸರ ಮುಂದೆ ಸೂರಜ್ ತಪ್ಪೊಪ್ಪಿಕೊಂಡಿದ್ದನು. ಹೀಗಾಗಿ ಸೂರಜ್ ವಿರುದ್ಧ ಸೆಕ್ಷನ್ 302(ಕೊಲೆ), 326, 307 ಹಾಗೂ 201ರ ಅಡಿ ದೂರು ದಾಖಲಾಗಿತ್ತು.
ಈಗ ಕೋರ್ಟ್ನಲ್ಲಿ ಸೂರಜ್ಗೆ ಶಿಕ್ಷೆ ವಿಧಿಸಲಾಗಿದ್ದು, ಉತ್ರಾ ಕುಟುಂಬದ ಪರ ವಕೀಲರು ಮರಣದಂಡನೆಗೆ ಆಗ್ರಹಿಸಿದ್ದರು. ಸೂರಜ್ ವಿರುದ್ಧವಾಗಿ 87 ಸಾಕ್ಷ್ಯಗಳು, 288 ದಾಖಲೆಗಳು ಜೊತೆಗೆ ಪೊಲೀಸರು ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು.
ಕೊಲ್ಲಂನ ಅಂಚಲ್ನ ನಿವಾಸಿಯಾಗಿದ್ದ ಉತ್ರಾ ತಾನು ವಿವಾಹವಾದಾಗನಿಂದ ಐದು ಲಕ್ಷ ರೂಪಾಯಿ ನಗದು, ಒಂದು ಕಾರು ಮತ್ತು 90 ಸವರನ್ ಚಿನ್ನವನ್ನು ವರದಕ್ಷಿಣೆಯಾಗಿ ಪಡೆದಿದ್ದನು ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಅಪ್ತಾಪ್ತೆಯ ಮೇಲೆ ಅತ್ಯಾಚಾರ: ಆರೋಪಿಯ ಖುಲಾಸೆಗೊಳಿಸಿದ ಆದೇಶ ರದ್ದುಪಡಿಸಿದ ಹೈಕೋರ್ಟ್