ರೇವಾ (ಮಧ್ಯಪ್ರದೇಶ): ಜಿಲ್ಲೆಯಲ್ಲಿ 2021 ರಲ್ಲಿ ವ್ಯಕ್ತಿಯೊಬ್ಬನನ್ನು ಕಟ್ಟಿಹಾಕಿ ಮತ್ತು ವಿವಸ್ತ್ರಗೊಳಿಸಿ ಸರಪಂಚ್‌ನ ಪತಿಯೊಬ್ಬರು ಹಲ್ಲೆ ಮಾಡಿದ್ದರು. ಈ ವಿಡಿಯೋ ಇತ್ತೀಚೆಗೆ ವೈರಲ್ ಆಗಿದ್ದು, ಈಗ ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿಡಿಯೋದಲ್ಲಿ ವ್ಯಕ್ತಿಯೊಬ್ಬರ ಕೈಗಳನ್ನು ಕಟ್ಟಿ ಹಾಕಿ, ಆತನನ್ನು ಅರೆಬೆತ್ತಲೆಯಾಗಿ ಸರಪಂಚ್ ಪತಿಯೊಬ್ಬರು ಥಳಿಸುತ್ತಿರುವುದನ್ನು ಕಾಣಬಹುದು. ಅಷ್ಟೇ ಅಲ್ಲ, ಆ ಸರಪಂಚ್ ಪತಿ ಆ ವ್ಯಕ್ತಿಯ ಮುಖಕ್ಕೆ ಹಲವು ಬಾರಿ ಕಪಾಳಮೋಕ್ಷ ಮಾಡಿ ಕಟ್ಟಿಗೆಯಿಂದ ಹಲ್ಲೆ ಮಾಡಿರುವುದು ಸಹ ಕಂಡು ಬಂದಿದೆ. ಜಿಲ್ಲೆಯ ಹನುಮಾನ್ ಪೊಲೀಸ್ ಠಾಣಾ ವ್ಯಾಪ್ತಿಯ ಪಿಪರ್ಹಿ ಗ್ರಾಮದ ಸರಪಂಚ್ ಪತಿ ಜವಾಹರ್ ಸಿಂಗ್ ಎಂಬಾತ ಈ ಹಲ್ಲೆ ಮಾಡಿರುವುದು ವಿಡಿಯೋ ಮೂಲಕ ತಿಳಿದು ಬಂದಿದೆ.
ಮಾಧ್ಯಮಗಳ ಪ್ರಕಾರ, ಪಿಪ್ರಾಹಿ ಗ್ರಾಮದಲ್ಲಿ ವಾಸಿಸುವ ಯುವಕ ಗ್ರಾಮದಲ್ಲಿಯೇ ಅಂಗಡಿ ನಡೆಸುತ್ತಿದ್ದನು. ಆರೋಪಿ ಸರಪಂಚ್ ಪತಿ ಜವಾಹರ್ ಸಿಂಗ್ ಹಣ ಮತ್ತು ಜಮೀನಿಗೆ ಸಂಬಂಧಿಸಿದಂತೆ ಸಂತ್ರಸ್ತ ಯುವಕನೊಂದಿಗೆ ವಿವಾದ ಹೊಂದಿದ್ದನು. ಮೇ 2021 ರಲ್ಲಿ ಬಾಡಿಗೆ ವಾಹನದ ಮೇಲಿನ ಬಾಕಿ ಪಾವತಿಗೆ ಸಂಬಂಧಿಸಿದ ಕೆಲವು ವಿಷಯವನ್ನು ಚರ್ಚಿಸಲು ಸಿಂಗ್ ಸಂತ್ರಸ್ತನನ್ನು ಮನೆಗೆ ಕರೆದಿದ್ದ. ಬಳಿಕ ಆತನನ್ನು ಒತ್ತೆಯಾಳಾಗಿ ಸಿಂಗ್ ಇರಿಸಿಕೊಂಡಿದ್ದ.
ಸ್ವಲ್ಪ ಸಮಯದ ಬಳಿಕ ಆ ಯುವಕನನ್ನು ಕಟ್ಟಿಹಾಕಿ, ವಿವಸ್ತ್ರಗೊಳಿಸಿ, ಕೆಟ್ಟದಾಗಿ ಥಳಿಸಿದ್ದಾನೆ ಸಿಂಗ್. ಆ ಯುವಕನನ್ನು ಸಿಂಗ್ ಥಳಿಸುತ್ತಿದ್ದಾಗ ಆತನ ಸಹಾಯಕರೊಬ್ಬರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಹಲವಾರು ಗಂಟೆಗಳ ಕಾಲ ಸಂತ್ರಸ್ತನನ್ನು ಅರೆಬೆತ್ತಲೆಯಾಗಿ ಮನೆಯ ಮುಂದೆ ನಿಲ್ಲಿಸಿದ್ದಾನೆ. ಯುವಕ ಅರೆಬೆತ್ತಲೆಯಾಗಿ ಮನೆಯಿಂದ ಹೊರಗೆ ನಿಂತಿದ್ದು, ಇದರಿಂದ ಸಂತ್ರಸ್ತ ಹಲವು ಗಂಟೆಗಳ ಕಾಲ ಮುಜುಗರಕ್ಕೊಳಗಾಗಿದ್ದನು. ನಂತರ ಆ ಯುವಕನನ್ನು ಬಿಡಲಾಗಿತ್ತು.
ಸರಪಂಚ್ ಪತಿ ಯುವಕನೊಂದಿಗೆ ಅನುಚಿತವಾಗಿ ವರ್ತಿಸಿದ ಈ ವೈರಲ್ ವಿಡಿಯೋ ಎರಡು ವರ್ಷದ ಹಳೆಯದು. ವಿಡಿಯೋ ವೈರಲ್ ಆದ ನಂತರ ಪೊಲೀಸರು ವಿಷಯ ತಿಳಿದು ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಆರೋಪಿ ಸರಪಂಚ್ ಪತಿ ಜವಾಹರ್ ಸಿಂಗ್ ಮತ್ತು ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಆರೋಪಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡ ಪೊಲೀಸರು ಎಲ್ಲರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಆರೋಪಿಗಳನ್ನು ಜೈಲಿಗೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ.
ವೈರಲ್ ಆಗಿರುವ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸಿಂಗ್ ಮಾತನಾಡಿ, ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಷಯ ಪೊಲೀಸರ ಗಮನಕ್ಕೆ ಬಂದ ತಕ್ಷಣ ತನಿಖೆ ನಡೆಸಲಾಯಿತು. ಸಂತ್ರಸ್ತನನ್ನು ಕರೆಸಿ ವಿಚಾರಣೆ ನಡೆಸಲಾಯಿತು. ಸರಪಂಚ್ ಪತಿ ಮತ್ತು ಅವರ ಇತರ ಇಬ್ಬರು ಸಹಚರರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಅವರನ್ನು ವಿಚಾರಣೆಯ ನಂತರ ಜೈಲಿಗೆ ಕಳುಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಓದಿ: ಮಣಿಪುರ ಹಿಂಸಾಚಾರ ಕುರಿತು ಪ್ರಧಾನಿ ಮೋದಿ ಹೇಳಿಕೆಗೆ ಒತ್ತಾಯಿಸಿ ಪ್ರತಿಪಕ್ಷಗಳ ಪ್ರತಿಭಟನೆ - VIDEO