ಚೆನ್ನೈ: ತನ್ನ ಪತ್ನಿಯ ಜೊತೆಗೆ ವಿವಾಹೇತರ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ವ್ಯಕ್ತಿಯೋರ್ವನನ್ನು ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಚೆನ್ನೈನ ಕಣ್ಣಗಿ ನಗರದ ಸಂತೋಷ್‌ಕುಮಾರ್ (33) ಎಂಬಾತ ಕೊಲೆಯಾದ ವ್ಯಕ್ತಿ. ಈತ ಪುದುಪೇಟೆಯಲ್ಲಿ ಮೀನಿನ ವ್ಯಾಪಾರ ಮಾಡಿಕೊಂಡಿದ್ದನು. ಕಳೆದ ಕೆಲವು ವರ್ಷಗಳ ಹಿಂದೆ ಈತನ ಪತ್ನಿ ಸಾವನ್ನಪ್ಪಿದ್ದು, ಒಬ್ಬ ಮಗನಿದ್ದಾನೆ.
ಕಣ್ಣಗಿ ನಗರದ ಇಲವರಸನ್ (21) ಅವರ ಪತ್ನಿಯೊಂದಿಗೆ ಸಂತೋಷ್ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿತ್ತು. ಈ ಹಿನ್ನೆಲೆ ಸಂತೋಷ್ಗೆ ಇಲವರಸನ್ ಅನೇಕ ಬಾರಿ ಎಚ್ಚರಿಕೆ ಸಹ ನೀಡಿದ್ದ. ಆದರೆ, ಸಂತೋಷ್ ಈ ಸಂಬಂಧ ಬಿಡಲು ನಿರಾಕರಿಸಿದ ಹಿನ್ನೆಲೆ ಇಲವರಸನ್ ಬುಧವಾರ ರಾತ್ರಿ ಸ್ನೇಹಿತರಾದ ಅರುಣ್ (20) ಹಾಗೂ ಮತ್ತೊಬ್ಬನ ಜೊತೆಗೆ ಬಂದು ಪುದುಪೇಟೆಯಲ್ಲಿ ಸಂತೋಷ್ ಮೇಲೆ ಹಲ್ಲೆ ನಡೆಸಿದ್ದಾನೆ.
ನಂತರ ಚಾಕುವಿನಿಂದ ಕತ್ತನ್ನು ಇರಿದು ರಸ್ತೆ ಮೇಲೆ ಮಲಗಿಸಿ ಪರಾರಿಯಾಗಿದ್ದಾನೆ. ಸಂತೋಷ್ ಅವರನ್ನು ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದ್ರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಎಗ್ಮೋರ್ ಠಾಣೆ ಪೊಲೀಸರು ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ.