ಕೊಂಡಗಾಂವ (ಛತ್ತೀಸ್ಘಡ): ಛತ್ತೀಸ್ಘಡದಲ್ಲೊಂದು ವಿಚಿತ್ರವಾದ ಮದುವೆ ನಡೆದಿದೆ. ವ್ಯಕ್ತಿಯೊಬ್ಬ ಒಂದೇ ಮಂಪಟದಲ್ಲಿ ಇಬ್ಬರು ಯುವತಿಯರನ್ನು ಒಟ್ಟಿಗೆ ವಿವಾಹವಾಗಿದ್ದಾನೆ. ಇದೇನು ಹೊಸದಲ್ಲ ನಿಜ. ಆದರೆ, ಇದು ಬರೀ ಮದುವೆಯಲ್ಲ, ಒಂದು ರೀತಿಯಲ್ಲಿ ಒಬ್ಬ ತಂದೆ- ಇಬ್ಬರು ತಾಯಿಂದಿರ ಮದುವೆ!.
ಹೌದು, ಇದೇನಪ್ಪಾ ಎಂಬ ಗೊಂದಲ ಮೂಡಬಹುದು. ಆದರೆ, ಇಂತಹ ವಿಲಕ್ಷಣ ಮದುವೆಗೆ ಕೊಂಡಗಾಂವದ ಉಮ್ಲಾ ಗ್ರಾಮ ಸಾಕ್ಷಿಯಾಗಿದೆ. ಈ ಗ್ರಾಮದ ರಾಜನ್ ಸಿಂಗ್ ಸಲಾಮ್ ಎಂಬಾತನ ಮದುವೆ ಅಡೇಂಗಾ ಗ್ರಾಮದ ದುರ್ಗೇಶ್ವರಿ ಮಕ್ರಂ ಜೊತೆಗೆ ನಿಶ್ಚಯವಾಗಿ ನಿಶ್ಚಿತಾರ್ಥವೂ ಆಗಿತ್ತು. ಆದರೆ, ಮದುವೆಗೆ ಮುಂಚೆಯೇ ರಾಜನ್ ಸಿಂಗ್ ಮನೆಗೆ ಬಂದು ದುರ್ಗೇಶ್ವರಿ ವಾಸವಿದ್ದಳು. ಕೆಲ ತಿಂಗಳ ಬಳಿಕ ಆಕೆ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಾಳೆ.
ಮತ್ತೊಬ್ಬಳೊಂದಿಗೂ ಪ್ರೇಮ: ದುರ್ಗೇಶ್ವರಿ ಜೊತೆಗೆ ನಿಶ್ಚಿತಾರ್ಥವಾಗಿ ಆಕೆ ಬಂದು ತನ್ನ ಮನೆಯಲ್ಲಿ ವಾಸವಾದ ಮೇಲೂ ರಾಜನ್ ಸಿಂಗ್‌ಗೆ ಮತ್ತೊಬ್ಬಳ ಮೇಲೆ ಮನಸಾಗಿದೆ. ಅನ್ವಾರಿ ಗ್ರಾಮದ ಸುನ್ನೋ ಭಾಯಿ ಗೋಟಾ ಎಂಬಾಕೆಯನ್ನು ಪ್ರೀತಿಸಲು ಶುರು ಮಾಡಿ, ಆಕೆಯನ್ನೂ ಗರ್ಭಿಣಿ ಮಾಡಿದ್ದಾನೆ. ಅಂತೆಯೇ ಈಕೆಯೂ ಮಗುವಿಗೆ ಜನ್ಮ ನೀಡಿದ್ದಾಳೆ.
ಮದುವೆಗೆ ಇಬ್ಬರೂ ಒಪ್ಪಿದ್ರು: ದುರ್ಗೇಶ್ವರಿ ಹಾಗೂ ಸುನ್ನೋ ಭಾಯಿ ಇಬ್ಬರಿಗೂ ರಾಜನ್ ಸಿಂಗ್ ಮಗು ಕೊಟ್ಟಿರುವ ವಿಷಯ ಮೂವರ ಕುಟುಂಬವರಿಗೂ ಗೊತ್ತಾಗಿದೆ. ಆಗ ಗ್ರಾಮದಲ್ಲೇ ರಾಜಿ ಪಂಚಾಯಿತಿ ಮಾಡಿದ್ದಾರೆ. ಈ ವೇಳೆ ರಾಜನ್ ಸಿಂಗ್ನನ್ನು ಮದುವೆಯಾಗಲು ದುರ್ಗೇಶ್ವರಿ, ಸುನ್ನೋ ಭಾಯಿ ಇಬ್ಬರು ಕೂಡ ಒಪ್ಪಿಕೊಂಡಿದ್ದಾರೆ. ಅಂತೆಯೇ ಮದುವೆ ಆಮಂತ್ರಣ ಪತ್ರದಲ್ಲಿ ರಾಜನ್ ಸಿಂಗ್ ಜೊತೆಗೆ ಇಬ್ಬರ ಹೆಸರು ಕೂಡ ಮುದ್ರಿಸಲಾಗಿದೆ.
ಮಂಪಟದಲ್ಲಿ ಮಕ್ಕಳು ಹಾಜರ್: ರಾಜನ್ ಸಿಂಗ್ ಜೊತೆಗೆ ದುರ್ಗೇಶ್ವರಿ ಹಾಗೂ ಸುನ್ನೋ ಭಾಯಿ ಮದುವೆ ಒಂದೇ ಮಂಪಟದಲ್ಲಿ ಜೂ.8ರಂದು ನೆರವೇರಿದೆ. ಈ ಸಂದರ್ಭದಲ್ಲಿ ಸುನ್ನೋ ಭಾಯಿ ತನ್ನ ಚಿಕ್ಕ ಮಗಳೊಂದಿಗೆ ಹಾಗೂ ದುರ್ಗೇಶ್ವರಿ ಕೂಡ ತನ್ನ ಚಿಕ್ಕ ಮಗಳೊಂದಿಗೆ ಮಂಟಪಕ್ಕೆ ಬಂದಿದ್ದಾರೆ. ತಾಳಿ ಕಟ್ಟುವ ಸಂದರ್ಭದಲ್ಲೂ ತಮ್ಮ ಮಕ್ಕಳನ್ನು ಮಡಿಲಿನಲ್ಲೇ ಈ ತಾಯಂದಿರು ಇಟ್ಟುಕೊಂಡಿದ್ದರು. ಜೊತೆಗೆ ಪಕ್ಕದಲ್ಲಿ ತಂದೆ ರಾಜನ್ ಸಿಂಗ್ ಇದ್ದ!.
ಇದನ್ನೂ ಓದಿ: ಪ್ರೇಮ, ಮದುವೆ ಆಮೇಲೆ ದರೋಡೆ.. ವಾರ್ಷಿಕೋತ್ಸವದ ಬಳಿಕ ಯುವಕನಿಗೆ ಗೊತ್ತಾಯ್ತು ನಾನು 7ನೇ ಪತಿ ಅಂತಾ!