ಪಾಲಕ್ಕಾಡ್ (ಕೇರಳ): ಅದು ಕೇರಳದ ಪಾಲಕ್ಕಾಡ್ ಜಿಲ್ಲೆಯ ಅರಿಯೂರ್ ಬಳಿಯ ಕರೈಕ್ಕಟ್ಟುಪರಂಬು ಎಂಬ ಪುಟ್ಟ ಗ್ರಾಮ. ಬಹಳ ಹಿಂದುಳಿದ ಪ್ರದೇಶವೂ ಆಗಿದ್ದು, ಅಕ್ಕ-ಪಕ್ಕದ ಮನೆಗಳ ನಡುವೆ ಹೆಚ್ಚು ಅಂತರವೂ ಅಲ್ಲಿಲ್ಲ. ಈ ಗ್ರಾಮದ ಯುವಕನೋರ್ವ ಕುಟುಂಬಸ್ಥರು, ನೆರೆಹೊರೆಯವರಿಗೆ ಒಂದು ಸಣ್ಣ ಸುಳಿವೂ ಸಿಗದಂತೆ ಬರೋಬ್ಬರಿ 10 ವರ್ಷಗಳ ಕಾಲ ತನ್ನ ಪ್ರೇಯಸಿಯನ್ನು ಮನೆಯಲ್ಲೇ ಅಡಗಿಸಿಟ್ಟುಕೊಂಡಿದ್ದ ಅಂದರೆ ನೀವು ನಂಬಲೇಬೇಕು.
ಯುವತಿ ನಾಪತ್ತೆ ಕೇಸ್
10 ವರ್ಷದ ಹಿಂದೆ ಕರೈಕ್ಕಟ್ಟುಪರಂಬು ಗ್ರಾಮದ 19 ವರ್ಷದ ಯುವತಿ ನಾಪತ್ತೆಯಾಗಿರುತ್ತಾಳೆ. ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದರೂ ಏನೂ ಪ್ರಯೋಜನವಾಗಿರಲಿಲ್ಲ. ಕೆಲ ವರ್ಷಗಳ ಕಾಲ ಮಗಳಿಗಾಗಿ ಹುಡುಕಿದ್ದ ಪೋಷಕರು ತಮ್ಮ ಪ್ರಯತ್ನ ನಿಲ್ಲಿಸಿದ್ದು, ಪೊಲೀಸರು ತನಿಖೆ ಅಂತ್ಯಗೊಳಿಸಿದ್ದರು. ಆದರೆ ದಶಕದ ಬಳಿಕ ಸಿನಿಮೀಯ ರೀತಿಯ ಕ್ಲೈಮ್ಯಾಕ್ಸ್ ಈ ನಾಪತ್ತೆ ಪ್ರಕರಣಕ್ಕೆ ಸಿಕ್ಕಿದೆ.
ಅಂತರ್ಜಾತಿ ಪ್ರೇಮ್ ಕಹಾನಿ
ನಾಪತ್ತೆಯಾಗಿದ್ದ ಯುವತಿ ಹಾಗೂ ಅದೇ ಗ್ರಾಮದಲ್ಲಿ ಆಕೆ ಮನೆಯಿಂದ ಕೇವಲ 100 ಮೀಟರ್ ದೂರದಲ್ಲಿದ್ದ ಮನೆಯ ಯುವಕ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಬೇರೆ ಬೇರೆ ಜಾತಿಯವರಾಗಿದ್ದರಿಂದ ಕುಟುಂಬಸ್ಥರಿಗೆ ಹೇಳುವ ಧೈರ್ಯ ಅವರಿಗೆ ಇರಲಿಲ್ಲ. ದಿಕ್ಕು ತೋಚದಂತಾದ ಯುವಕ ಆಕೆಯನ್ನ ತನ್ನ ಮನೆಗೆ ಕರೆದೊಯ್ದು ಸಣ್ಣ ಕೋಣೆಯೊಂದರಲ್ಲೇ ಅಡಗಿಸಿಟ್ಟುಕೊಂಡಿದ್ದಾನೆ. ತನ್ನ ಕುಟುಂಬಸ್ಥರಿಗೆ ವಿಷಯ ತಿಳಿಸಿ, ಕೆಲವು ದಿನಗಳಲ್ಲೇ ಮದುವೆಯಾಗಬೇಕು ಎಂದ ಯೋಚಿಸಿದ್ದ. ಆದರೆ ಕೈಯಲ್ಲಿ ಹಣವಿಲ್ಲದ ಕಾರಣ ಹಾಗೂ ಹೊರಗಡೆ ವಿಚಾರ ಬೆಳಕಿಗೆ ಬಂದರೆ ತಾನು ಎದುರಿಸಬೇಕಾದ ತೊಂದರೆಗಳನ್ನು ಊಹಿಸಿಕೊಂಡು ಭಯಭೀತನಾಗಿ 10 ವರ್ಷಗಳ ಕಾಲ ಇದನ್ನು ರಹಸ್ಯವಾಗಿಯೇ ಇಟ್ಟಿದ್ದನು.
ಕುಟುಂಬಸ್ಥರನ್ನು ಹೆದರಿಸಲು ತಂತ್ರ
ಅಂದಿನಿಂದಲೂ ಯುವಕ ತನ್ನ ಕೋಣೆಯೊಳಗೆ ಯಾರಿಗೂ ಪ್ರವೇಶ ನೀಡುತ್ತಿರಲಿಲ್ಲ. ತಾನೇನೆ ಮಾಡಿದರೂ ಮನೆಯವರು ನನ್ನನ್ನು ಪ್ರಶ್ನಿಸಬಾರದೆಂದು ಮಾನಸಿಕ ಅಸ್ವಸ್ಥತೆ ವರ್ತಿಸಲು ಆರಂಭಿಸಿದ್ದಾನೆ. ಇದರಿಂದ ಕುಟುಂಬಸ್ಥರೂ ಹೆದರಿ ಅವರ ಕೋಣೆಯೊಳಗೆ ಯಾರೂ ಬರುತ್ತಿರಲಿಲ್ಲ. ಕೆಲಸಕ್ಕೆಂದು ಮಾತ್ರ ಹೊರಗೆ ಹೋಗೋದು, ಉಳಿದ ಸಮಯ ಕೊಣೆಯಲ್ಲಿ ಪೂರ್ತಿ ಪ್ರೇಯಸಿಯೊಂದಿಗೆ ಕಳೆಯುತ್ತಿದ್ದನು. ಗ್ರಾಮದ ಸ್ನೇಹಿತರೊಂದಿಗೂ ಬೆರೆಯುವುದನ್ನು ನಿಲ್ಲಿಸಿದ್ದನು.
ಬಾತ್ರೂಂಗೆ ರಹಸ್ಯ ಮಾರ್ಗ
ರಾತ್ರಿ ಮನೆಯಲ್ಲಿ ಎಲ್ಲರೂ ನಿದ್ರೆಗೆ ಜಾರಿದ ಮೇಲೆ ಕೋಣೆಯ ಕಿಟಕಿ ಮೂಲಕ ಯುವತಿಯನ್ನ ಸ್ನಾನಗೃಹ, ಶೌಚಾಲಯಕ್ಕೆ ಕರೆದೊಯ್ಯುತ್ತಿದ್ದನು. ತನಗೆಂದು ಊಟ ತೆಗೆದುಕೊಂಡು ಕೋಣೆಯೊಳಗೆ ಹೋಗಿ ಆಕೆಗೆ ನೀಡುತ್ತಿದ್ದನು. ಪ್ರಿಯತಮನ ಮನೆಗೆ ಯಾರು ಬಂದ್ರು ಯಾರು ಹೋದ್ರು ಎಲ್ಲವನ್ನೂ ಗಮನಿಸುತ್ತಿದ್ದ ಯುವತಿ ಕಿಟಕಿ ಮೂಲಕ ಒಂದೆರಡು ಬಾರಿ ತನ್ನ ತಂದೆ ಮತ್ತು ತಾಯಿಯನ್ನು ನೋಡಿದ್ದಾಳೆ.
ಯುವಕ ನಾಪತ್ತೆಯಾಗಿದ್ದೇ ಸ್ಟೋರಿಗೆ ಟ್ವಿಸ್ಟ್
ಕಳೆದ ಮೂರು ತಿಂಗಳ ಹಿಂದೆ ಯುವತಿಯನ್ನು ಕರೆದುಕೊಂಡು ಆತ ಪರಾರಿಯಾಗಿ ವಿವಾಹವಾಗಿ ವಿಥಾನಸ್ಸೆರಿ ಎಂಬ ಗ್ರಾಮದಲ್ಲಿ ವಾಸ ಮಾಡಲು ಶುರು ಮಾಡಿದ್ದನು. ಮಗ ಕಾಣೆಯಾದನೆಂದು ಯುವಕನ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಒಂದು ದಿನ ಯುವಕನನ್ನು ಆತನ ಸಹೋದರ ನೋಡಿದ್ದು, ಆ ಬಳಿಕ ಪೊಲೀಸರು ವಿಚಾರಣೆಗೆ ಕರೆಯಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಪ್ರೇಮಿಗಳಿಬ್ಬರೂ ಸತ್ಯ ಬಾಯ್ಬಿಟ್ಟಿದ್ದು, 10 ವರ್ಷಗಳ ನಂಬಲಾಗದ ಕಥೆಯನ್ನು ಕೇಳಿ ಕುಟುಂಬಸ್ಥರು, ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.