ಮುಂಬೈ (ಮಹಾರಾಷ್ಟ್ರ) : ಮೈದಾನದಲ್ಲಿ ಕ್ರಿಕೆಟ್ ಆಡುವಾಗ ತಲೆಗೆ ಚೆಂಡು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಒಂದೇ ಮೈದಾನದಲ್ಲಿ ಎರಡು ಪಂದ್ಯಗಳು ನಡೆಯುತ್ತಿದ್ದ ವೇಳೆ ಚೆಂಡು ತಲೆಗೆ ಬಡಿದು ಉದ್ಯಮಿ ಜಯೇಶ್ ಚುನ್ನಿಲಾಲ್ ಸಾವ್ಲಾ ಮೃತಪಟ್ಟಿದ್ದಾರೆ. ಜಯೇಶ್ ಉದ್ಯಮಿಯಾಗಿದ್ದು, ಪತ್ನಿ ಮತ್ತು ಮಗನನ್ನು ಅಗಲಿದ್ದಾರೆ.
ಕಳೆದ ಸೋಮವಾರ ಮುಂಬೈನ ಮಾತುಂಗಾದಲ್ಲಿರುವ ದಾದರ್ಕರ್ ಮೈದಾನದಲ್ಲಿ ಕುಚ್ಚಿ ವಿಜಾ ಓಸ್ವಾಲ್ ವಿಕಾಸ್ ಲೆಜೆಂಡ್ಸ್ ಕಪ್ ಪಂದ್ಯಾಟ ನಡೆಯುತ್ತಿತ್ತು. ಹಲವು ತಂಡಗಳು ಈ ಪಂದ್ಯದಲ್ಲಿ ಭಾಗಿಯಾಗಿದ್ದವು. ಈ ಸಂಬಂಧ ಒಂದೇ ಮೈದಾನದಲ್ಲಿ ಎರಡು ಪಿಚ್ಗಳಲ್ಲಿ ಪಂದ್ಯಗಳು ನಡೆಯುತ್ತಿದ್ದವು.
ಒಂದು ಕಡೆ ಆಟ ಆಡುತ್ತಿದ್ದ ಜಯೇಶ್ ಅವರ ತಲೆ ಮೇಲೆ ಇನ್ನೊಂದು ಕಡೆಯಲ್ಲಿ ಆಡುತ್ತಿದ್ದ ಚೆಂಡು ಬಂದು ಬಡಿದಿದೆ. ಜಯೇಶ್ ವಿರುದ್ಧ ದಿಕ್ಕಿನಲ್ಲಿ ನಿಂತು ಫೀಲ್ಡಿಂಗ್ ಮಾಡುತ್ತಿದ್ದರಿಂದ ಈ ಚೆಂಡು ಬಂದಿರುವುದು ಅವರಿಗೆ ಕಂಡಿಲ್ಲ. ತಲೆಗೆ ಚೆಂಡು ಬಡಿದ ತಕ್ಷಣ ಕುಸಿದುಬಿದ್ದ ಜಯೇಶ್ ಅವರನ್ನು ಸಹ ಕ್ರೀಡಾಳುಗಳು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ವ್ಯಕ್ತಿಯನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಮುಂಬೈ ಪೊಲೀಸರು, ಇಲ್ಲಿನ ದಾದರ್ಕರ್ ಮೈದಾನದಲ್ಲಿ ಸೋಮವಾರ ಸಂಜೆ 5 ಗಂಟೆಗೆ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಈ ಸಂದರ್ಭ ಮೈದಾನದಲ್ಲಿ ಆಟ ಆಡುತ್ತಿದ್ದ ಜಯೇಶ್ ಚುನ್ನಿಲಾಲ್ ಸಾವ್ಲಾ (52) ಎಂಬವರ ತಲೆಗೆ ಚೆಂಡು ಬಡಿದಿದೆ. ಇದರಿಂದ ಜಯೇಶ್ ಸ್ಥಳದಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದಾರೆ. ತಕ್ಷಣ ಜಯೇಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜಯೇಶ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಈ ಮೈದಾನದಲ್ಲಿ ಕುಚ್ಚಿ ವಿಜಾ ಓಸ್ವಾಲ್ ವಿಕಾಸ್ ಲೆಜೆಂಡ್ಸ್ ಕಪ್ ಪಂದ್ಯಾವಳಿ ನಡೆಯುತ್ತಿತ್ತು. ಜಾಗದ ಕೊರತೆ ಮತ್ತು ಸಮಯದ ಅಭಾವದ ಕಾರಣದಿಂದ ಒಂದೇ ಮೈದಾನದಲ್ಲಿ ಎರಡೆರಡು ಪಂದ್ಯಗಳನ್ನು ನಡೆಸಲಾಗುತ್ತಿತ್ತು. ಈ ವೇಳೆ ಒಂದು ಕಡೆ ಆಡುತ್ತಿದ್ದ ಚೆಂಡು ಬಂದು ಇನ್ನೊಂದು ಪಂದ್ಯ ಆಡುತ್ತಿದ್ದ ಅವರ ಜಯೇಶ್ ತಲೆಗೆ ಬಂದು ಬಡಿದಿದೆ. ಇದರಿಂದ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಈ ಸಂಬಂಧ ಆಕಸ್ಮಿಕ ಸಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಆಸ್ಪತ್ರೆ ವೈದ್ಯರ ಮಾಹಿತಿ ಪ್ರಕಾರ, ಸೋಮವಾರ ಸಂಜೆ 5 ಗಂಟೆಗೆ ವ್ಯಕ್ತಿ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಯ ಎಲ್ಲಾ ಪ್ರಕ್ರಿಯೆ ಮುಗಿದ ಬಳಿ ದೇಹವನ್ನು ಕುಟುಂಬಸ್ಥರಿಗೆ ನೀಡಲಾಗುತ್ತದೆ.
ಇದನ್ನೂ ಓದಿ : ಕ್ರಿಕೆಟ್ ಆಡುತ್ತಿದ್ದಾಗ ಹೃದಯಾಘಾತ; 22 ವರ್ಷದ ಯುವಕ ಸಾವು