ಕೋಲ್ಕತ್ತಾ/ಪಶ್ಚಿಮ ಬಂಗಾಳ:ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಪತ್ರಕರ್ತರನ್ನು ಕೋವಿಡ್ ಯೋಧರು ಎಂದು ಘೋಷಿಸಿದ್ದು, ದೇಶಾದ್ಯಂತ ಅವರಿಗೆ ಉಚಿತ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಾಧ್ಯಮದವರ ಜೊತೆಗೆ ಮಾತನಾಡಿ ದೀದಿ, "ನಾನು ಎಲ್ಲ ಪತ್ರಕರ್ತರನ್ನು ಕೋವಿಡ್ ವಾರಿಯರ್ಸ್ ಎಂದು ಘೋಷಿಸುತ್ತೇನೆ. ನಿಮ್ಮ ಪ್ರಾಣವನ್ನು ಅಪಾಯಕ್ಕೆ ತಂದಿಟ್ಟುಕೊಂಡು ಕೆಲಸ ಮಾಡುತ್ತಿದ್ದೀರಿ. ಕೋವಿಡ್ ನಿಂದಾಗಿ ನಾವು ಅನೇಕ ಪತ್ರಕರ್ತರನ್ನು ಕಳೆದುಕೊಂಡಿದ್ದೇವೆ. ಕೊರೊನಾ ನಿರ್ವಹಣೆ ನನ್ನ ಆದ್ಯತೆಯಾಗಿದೆ. ಲಸಿಕೆ ಸರಬರಾಜು ಕೊರತೆ ಇದೆ. ಭಾರತದಲ್ಲಿ ಉತ್ಪಾದನೆಯಾದ ಸರಿಸುಮಾರು ಶೇ. 65 ರಷ್ಟು ಲಸಿಕೆಗಳನ್ನು ಈಗಾಗಲೇ ವಿದೇಶಕ್ಕೆ ಕಳುಹಿಸಲಾಗಿದೆ. ಆದರೂ, ನಾವು ದಿನಕ್ಕೆ 50,000 ಜನರಿಗೆ ಲಸಿಕೆ ನೀಡುತ್ತಿದ್ದೇವೆ. ಇಲ್ಲಿಯವರೆಗೆ ನಾವು 1.5 ಕೋಟಿ ಲಸಿಕೆ ನೀಡಿದ್ದೇವೆ. " ಎಂದರು.
ಇದೇ ವೇಳೆ, ಮಮತಾ ದೇಶದ ಪ್ರತಿ ನಾಗರಿಕರಿಗೆ ಕೇಂದ್ರ ಸರ್ಕಾರ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಬೇಕು ಎಂದು ಹೇಳಿದರು."ನಾವು ಕೇಂದ್ರದಿಂದ 3 ಕೋಟಿ ಲಸಿಕೆ ಪ್ರಮಾಣವನ್ನು ನೀಡುವಂತೆ ಕೋರಿದ್ದೇವೆ. ಭಾರತದ 140 ಕೋಟಿ ಜನರಿಗೆ ಲಸಿಕೆ ಉಚಿತವಾಗಿ ನೀಡಬೇಕು ಎಂದು ನಾನು ಹೇಳುತ್ತೇನೆ. ದೇಶಾದ್ಯಂತ ಲಸಿಕೆ ಕಾರ್ಯಕ್ರಮಕ್ಕಾಗಿ 30,000 ಕೋಟಿ ರೂ.ಗಳನ್ನು ಮಂಜೂರು ಮಾಡುವಂತೆ ನಾನು ಕೇಂದ್ರವನ್ನು ಕೋರುತ್ತೇನೆ. ಕೇಂದ್ರ ಚುನಾವಣೆಯಲ್ಲಿ ಖರ್ಚು ಮಾಡಿದ ಹಣದ ಒಂದು ಭಾಗವನ್ನು ಕೊರೊನಾ ಲಸಿಕೆಗಾಗಿ ಹೂಡಿಕೆ ಮಾಡಿದ್ದರೆ ಸಾರ್ವತ್ರಿಕ ವ್ಯಾಕ್ಸಿನೇಷನ್ ಅನ್ನು ಈಗಾಗಲೇ ಮಾಡಬಹುದಿತ್ತು "ಎಂದು ಹೇಳಿದ್ರು. ಲಸಿಕೆಗಳು ಮತ್ತು ವೈದ್ಯಕೀಯ ಆಮ್ಲಜನಕವನ್ನು ಕಳುಹಿಸುವಲ್ಲಿ ಕೇಂದ್ರ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ಅವರು ಆರೋಪಿಸಿದರು. ಗುಜರಾತ್‌ನಲ್ಲಿ ಬಿಜೆಪಿ ಪಕ್ಷದ ಕಚೇರಿಗಳಲ್ಲಿ ಲಸಿಕೆ ನೀಡಲಾಗುತ್ತದೆ" ಎಂದು ಅವರು ಹೇಳಿದರು.
ಇನ್ನು ಕೊರೊನಾ ರೋಗವನ್ನು ಗಮನದಲ್ಲಿಟ್ಟುಕೊಂಡು ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಸರಳವಾಗಿ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.