ನವದೆಹಲಿ: ಕೆಲವು ದಿನಗಳಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಹಲವು ರೀತಿಯ ಬೆಳವಣಿಗೆ ನಡೆಯುತ್ತಿದ್ದು ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ಕಪಿಲ್ ಸಿಬಲ್ ಪಕ್ಷದಲ್ಲಿ ಅಧ್ಯಕ್ಷರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ಕೊಟ್ಟಿದ್ದಾರೆ.
‘ಪಕ್ಷದಲ್ಲಿ ಅಧ್ಯಕ್ಷರಿಲ್ಲ ಎಂಬುದಾದರೆ ಈ ವರ್ಷದ ಆರಂಭದಲ್ಲಿ ಚುನಾವಣೆ ಹೇಗೆ ನಡೆಯಿತು?' ಎಂದು ಕೇಳಿದ್ದಾರೆ. ಅಷ್ಟೇ ಅಲ್ಲ, 'ಎಲ್ಲಾ ಪಕ್ಷಗಳಲ್ಲೂ ಒಳ ಜಗಳಗಳು ಇರುತ್ತವೆ. ಪಕ್ಷ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವುದು ಇದು ಹೊಸದೇನಲ್ಲ. ನಾವು ಶೀಘ್ರದಲ್ಲಿಯೇ ಈ ಬಿಕ್ಕಟ್ಟನ್ನು ಪರಿಹರಿಸುತ್ತೇವೆ ಮತ್ತು ಇನ್ನಷ್ಟು ಬಲವಾಗುತ್ತೇವೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಮ್ಮ ಅಧ್ಯಕ್ಷರನ್ನು ಮತ್ತು ರಾಹುಲ್ ಗಾಂಧಿಯನ್ನು ಬೆಂಬಲಿಸಬೇಕು, ಪಕ್ಷವನ್ನು ಬಲಪಡಿಸಬೇಕು ಎಂಬುದಾಗಿ ಪಕ್ಷದ ಇತರ ನಾಯಕರಿಗೆ ಸಲಹೆ ನೀಡುತ್ತೇನೆ ಎಂದು ಖರ್ಗೆ ಹೇಳಿದ್ದಾರೆ.
ಇತ್ತೀಚೆಗೆ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಆ ಬಳಿಕ ನಡೆದ ವಿದ್ಯಮಾನಗಳಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಕೂಡಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಮಾತನಾಡಿದ್ದ ಕಪಿಲ್ ಸಿಬಲ್, ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷರಿಲ್ಲ. ಯಾರು ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ ಎಂದು ಅಸಮಾಧಾನ ತೋಡಿಕೊಂಡಿದ್ದರು. ಇದಕ್ಕೆ ಪಕ್ಷದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.