ಪುಣೆ (ಮಹಾರಾಷ್ಟ್ರ): ಆನ್‌ಲೈನ್ ಗೇಮಿಂಗ್ ಆ್ಯಪ್ನಲ್ಲಿ ಒಂದೂವರೆ ಕೋಟಿ ರೂ. ಬಹುಮಾನ ಗೆದ್ದು ಸುದ್ದಿಯಾಗಿದ್ದ ಮಹಾರಾಷ್ಟ್ರದ ಪೊಲೀಸ್ ಅಧಿಕಾರಿ ಸೋಮನಾಥ್ ಝೆಂಡೆ ತಲೆದಂಡವಾಗಿದೆ. ಅಶಿಸ್ತಿನ ವರ್ತನೆ ಹಾಗೂ ಪೊಲೀಸ್ ಇಲಾಖೆಯ ಪ್ರತಿಷ್ಠೆಗೆ ಕಳಂಕ ತಂದ ಆರೋಪದಡಿ ಸಬ್ ಇನ್ಸ್ಪೆಕ್ಟರ್ ಆಗಿದ್ದ ಸೋಮನಾಥ್ ಅವರನ್ನು ಅಮಾನತುಗೊಳಿಸಲಾಗಿದೆ.
ಪುಣೆಯ ಪಿಂಪ್ರಿ ಚಿಂಚ್ವಾಡ ನಗರದ ಪೊಲೀಸ್ ಮುಖ್ಯ ಕಚೇರಿಯಲ್ಲಿ ಪಿಎಸ್ಐ ಸೋಮನಾಥ್ ಝೆಂಡೆ ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಆನ್‌ಲೈನ್ ಕ್ರಿಕೆಟ್ ಗೇಮ್ನಲ್ಲಿ 1.5 ಕೋಟಿ ರೂ. ಬಹುಮಾನ ಗೆಲ್ಲುವ ಮೂಲಕ ಸಾಕಷ್ಟು ಸುದ್ದಿಯಾಗಿದ್ದರು. ಇದರ ಬೆನ್ನಲ್ಲೇ ಅವರು ವಿವಾದದ ಸುಳಿಗೂ ಸಿಲುಕಿದ್ದರು. ಇದರಿಂದ ಪೊಲೀಸ್ ಇಲಾಖೆಯು ತನಿಖೆಗೆ ಒಳಪಡಿಸಲಾಗಿತ್ತು. ಇದೀಗ ಈ ತನಿಖಾ ವರದಿ ಬಂದಿದ್ದು, ಇದರ ಆಧಾರದ ಮೇಲೆ ಸೋಮನಾಥ್ ಝೆಂಡೆ ಅವರನ್ನು ಅಮಾನತುಗೊಳಿಸಲಾಗಿದೆ.
ಈ ಕುರಿತು ಸಹಾಯಕ ಪೊಲೀಸ್ ಆಯುಕ್ತ ಸತೀಶ್ ಮಾನೆ ಮಾಹಿತಿ ನೀಡಿದ್ದಾರೆ, ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆ ತಂದಿರುವ ಹಾಗೂ ಅಶಿಸ್ತಿನ ವರ್ತನೆ ಕಾರಣದಿಂದ ಪಿಎಸ್ಐ ಸೋಮನಾಥ್ ಝೆಂಡೆ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ, ಸೋಮನಾಥ್ ಝೆಂಡೆ ಕುರಿತು ಮುಂದಿನ ಇಲಾಖಾ ವಿಚಾರಣೆಯನ್ನು ಉಪ ಪೊಲೀಸ್ ಆಯುಕ್ತರಿಗೆ ಹಸ್ತಾಂತರಿಸಲಾಗಿದೆ ಎಂದು ಎಸಿಪಿ ತಿಳಿಸಿದ್ದಾರೆ.
ಇದನ್ನೂ ಓದಿ: ಗೇಮಿಂಗ್ ಆ್ಯಪ್ನಲ್ಲಿ 1.5 ಕೋಟಿ ರೂ. ಬಹುಮಾನ ಗೆದ್ದಿದ್ದ ಪಿಎಸ್ಐ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗೃಹ ಸಚಿವರಿಗೆ ಪತ್ರ...
ಪ್ರಕರಣದ ಹಿನ್ನೆಲೆ: ಅಕ್ಟೋಬರ್ 10ರಂದು ಕರ್ತವ್ಯದಲ್ಲಿರುವಾಗಲೇ ಪಿಎಸ್ಐ ಸೋಮನಾಥ್ ಝೆಂಡೆ ಆನ್‌ಲೈನ್ ಗೇಮ್ಸ್ ನಲ್ಲಿ ಪಾಲ್ಗೊಂಡಿದ್ದರು. ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಪಂದ್ಯದಲ್ಲಿ ಆನ್‌ಲೈನ್ ಗೇಮ್ ಆಡಿ 1.5 ಕೋಟಿ ರೂ. ಬಹುಮಾನ ಗಳಿಸಿದ್ದರು. ಈ ಮೂಲಕ ಒಂದೇ ದಿನದಲ್ಲಿ ಕೋಟ್ಯಧೀಶರಾಗಿದ್ದರು.
ಇದೇ ವೇಳೆ, ಓರ್ವ ಪೊಲೀಸ್ ಅಧಿಕಾರಿಯಾಗಿ ಆನ್‌ಲೈನ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ಕಾರಣಕ್ಕಾಗಿ ಸೋಮನಾಥ್ ಝೆಂಡೆ ಟೀಕೆಗೂ ಗುರಿಯಾಗಿದ್ದರು. ಹೀಗಾಗಿ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆಗ್ರಹಗಳು ವ್ಯಕ್ತವಾಗಿದ್ದವು. ಆನ್‌ಲೈನ್ ಆಟಗಳಿಂದ ದೂರವಿರಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿರುವ ಅಧಿಕಾರಿ, ಇಂತಹ ಬೆಟ್ಟಿಂಗ್ನಲ್ಲಿ ತೊಡಗಿದ್ದು ಸರಿಯಲ್ಲ ಎಂದು ಅಭಿಪ್ರಾಯ ಕೇಳಿ ಬಂದಿದ್ದವು.
ಈ ಕುರಿತು ಗೃಹ ಸಚಿವ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದಿದ್ದ ಬಿಜೆಪಿ ನಾಯಕ ಅಮೋಲ್ ಘೋರತ್, ಪೊಲೀಸ್ ಕರ್ತವ್ಯದ ವೇಳೆ ಆನ್‌ಲೈನ್ ಗೇಮಿಂಗ್ನಲ್ಲಿ ತೊಡಗಿದ್ದ ಪಿಎಸ್ಐ ಸೋಮನಾಥ್ ಝೆಂಡೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಅಲ್ಲದೇ, ಸಮವಸ್ತ್ರದಲ್ಲಿರುವ ಸೋಮನಾಥ್ ಝೆಂಡೆ ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಇದನ್ನೂ ಓದಿ: ಗೇಮಿಂಗ್ ಆ್ಯಪ್ನಲ್ಲಿ 1.5 ಕೋಟಿ ರೂ. ಬಹುಮಾನ ಗೆದ್ದ ಪಿಎಸ್ಐ