ಹೈದರಾಬಾದ್: ಸಂವಿಧಾನದ ನಿಯಮಗಳನ್ನು ನೋಡಿದರೆ, ಅಗತ್ಯ ಸಂಖ್ಯಾಬಲವಿಲ್ಲದೇ ಏಕನಾಥ್ ಶಿಂದೆ ನೇತೃತ್ವದ ಬಣವು ಶಾಸಕಾಂಗ ಪಕ್ಷದ ನಾಯಕನ ವಿರುದ್ಧ ನಿರ್ಣಯಗಳನ್ನು ಪಾಸು ಮಾಡುತ್ತಿರುವುದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಅಗತ್ಯವಾದ ಜೀವದಾನ ಸಿಗುತ್ತಿರುವಂತೆ ಕಾಣಿಸುತ್ತಿದೆ. ಇಂಥ ಪರಿಸ್ಥಿತಿಗಳಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ವಿಧಾನಸಭೆಯ ಸ್ಪೀಕರ್ ಆದವರು ಬಂಡಾಯ ಶಾಸಕರನ್ನು ಅನರ್ಹಗೊಳಿಸಿದ ಸಾಕಷ್ಟು ಪ್ರಕರಣಗಳು ಈ ಹಿಂದೆ ಘಟಿಸಿವೆ.
ಅಂದು ತಮಿಳುನಾಡಿನಲ್ಲಿ ಏನಾಗಿತ್ತು?: 2017 ರಲ್ಲಿ ಎಡಪ್ಪಾಡಿ ಕೆ. ಪಳನಿಸಾಮಿ (ಇಪಿಎಸ್) ವಿರುದ್ಧ ಬಂಡೆದ್ದ ಎಐಎಡಿಎಂಕೆ ಶಾಸಕರನ್ನು ಅನರ್ಹಗೊಳಿಸಿದ ಪ್ರಕರಣವನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು. ಆ ಪರಿಸ್ಥಿತಿಗೂ ಇಂದಿನ ಮಹಾರಾಷ್ಟ್ರ ರಾಜಕೀಯ ಸ್ಥಿತಿಗೂ ಸಾಮ್ಯತೆಗಳಿವೆ. ವಿಕೆ ಶಶಿಕಲಾ ಅವರ ಸಹೋದರ ಸಂಬಂಧಿ ಟಿಟಿವಿ ದಿನಕರನ್ ಅವರು ಪಕ್ಷದಲ್ಲಿ ನಿರ್ಲಕ್ಷಕ್ಕೊಳಗಾದಾಗ, 19 ಶಾಸಕರೊಂದಿಗೆ ಅವರು ಬಂಡೆದ್ದರು. ಇಪಿಎಸ್ ಅವರು ಅಧಿಕಾರ ದುರ್ಬಳಕೆ, ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತ ಮಾಡುತ್ತಿರುವುದರಿಂದ ಅವರಲ್ಲಿ ನಾವು ವಿಶ್ವಾಸ ಕಳೆದುಕೊಂಡಿದ್ದೇವೆ ಎಂದು ಇವರು ನಂತರದಲ್ಲಿ ರಾಜ್ಯಪಾಲರಿಗೆ ಪತ್ರ ನೀಡಿದ್ದರು.
ಆ ಸಂದರ್ಭದಲ್ಲಿ ಸರ್ಕಾರದ ವಿಪ್ ರಾಜೇಂದ್ರನ್, ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ತಮಿಳು ನಾಡು ವಿಧಾನ ಸಭೆಯ ಸ್ಪೀಕರ್ ಪಿ ಧನಪಾಲ್ ರಿಗೆ ಕೋರಿದ್ದರು. ಇದರ ಬೆನ್ನಲ್ಲೇ ನಿಮ್ಮನ್ನೆಲ್ಲ ಯಾಕೆ ಅನರ್ಹಗೊಳಿಸಬಾರದು ಎಂದು ಪ್ರಶ್ನಿಸಿ ಬಂಡು ಶಾಸಕರಿಗೆ ಸ್ಪೀಕರ್ ನೋಟಿಸ್ ನೀಡಿದ್ದರು. ಅವರೆಲ್ಲ ತಮ್ಮ ಉತ್ತರ ನೀಡಲು ಕಾಲಾವಕಾಶ ಕೂಡ ನೀಡಲಾಗಿತ್ತು.
ಮದ್ರಾಸ್ ದ್ವಿಸದಸ್ಯ ಪೀಠ ನೀಡಿದ ತೀರ್ಪೇನು? ವಾದ-ವಿವಾದ ಆಲಿಸಿದ ನಂತರ ಟಿಟಿವಿ ಜೊತೆಗಿದ್ದ 18 ಬಂಡು ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿ ಆದೇಶ ನೀಡಿದರು. ಆಡಳಿತದಲ್ಲಿರುವ ಗುಂಪಿಗೆ ಮರಳಿದ ಓರ್ವ ಶಾಸಕನಿಗೆ ಕ್ಷಮೆ ನೀಡಲಾಗಿತ್ತು. ಸ್ಪೀಕರ್ ಅವರ ಈ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಯಿತು. ಇಬ್ಬರು ನ್ಯಾಯಮೂರ್ತಿಗಳ ಹೈಕೋರ್ಟ್ ಪೀಠ ವಿಭಿನ್ನ ಆದೇಶ ನೀಡಿತು. ಕೊನೆಗೆ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಸುಪ್ರೀಂಕೋರ್ಟ್ ನೇಮಿಸಿದ ಮೂರನೇ ನ್ಯಾಯಮೂರ್ತಿಗಳು ಶಾಸಕರ ಅನರ್ಹತೆಯನ್ನು ಎತ್ತಿ ಹಿಡಿದರು.
ತನ್ನ ಭಾರಕ್ಕೆ ತಾನೇ ಕುಸಿಯುವ ಹಂತ ತಲುಪಿದ್ದ ಇಪಿಎಸ್ ಸರ್ಕಾರವು ಹೈಕೋರ್ಟ್ ನ ಈ ಆದೇಶದ ನಂತರ ಸುಭದ್ರವಾಯಿತು ಹಾಗೂ ಇಪಿಎಸ್ ತಮ್ಮ ಸಂಪೂರ್ಣ ಅವಧಿಯನ್ನು ಮುಗಿಸಿದರು.
ಡೆಪ್ಯೂಟಿ ಸ್ಪೀಕರ್ಗೆ ಪತ್ರದಲ್ಲಿ ಏನಿದೆ?: ಈಗ ಮಹಾರಾಷ್ಟ್ರದ ವಿಷಯಕ್ಕೆ ಬರುವುದಾದರೆ, ಶಿಂದೆ ಬಣವು ಜೂನ್ 21, 2022 ರಂದು ಡೆಪ್ಯೂಟಿ ಸ್ಪೀಕರ್ರಿಗೆ ಪತ್ರ ಬರೆದಿದೆ. ತಾವು 34 ಶಾಸಕರು ಹಾಗೂ 4 ಜನ ಪಕ್ಷೇತರ ಶಾಸಕರು ಒಮ್ಮತದಿಂದ ಅಂಗೀಕರಿಸಿದ ಎರಡು ನಿರ್ಣಯಗಳನ್ನು ಪತ್ರದಲ್ಲಿ ತಿಳಿಸಲಾಗಿದೆ. ಏಕನಾಥ್ ಶಿಂದೆ ಅವರನ್ನೇ ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿದ ಬಗ್ಗೆ ಇದರಲ್ಲಿ ಹೇಳಲಾಗಿದೆ. ಈ ಮಧ್ಯೆ ಉದ್ಧವ್ ಠಾಕ್ರೆ ಬಣವು ಶಿವಸೇನಾ ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ಶಿಂದೆ ಅವರನ್ನು ವಜಾ ಮಾಡುವ ನಿರ್ಣಯ ಅಂಗೀಕರಿಸಿತ್ತು.
ಸಂವಿಧಾನದ 10ನೇ ಶೆಡ್ಯೂಲ್ ಹೇಳೋದೇನು?: 2003 ರಲ್ಲಿ ಸಂವಿಧಾನದ 10ನೇ ಶೆಡ್ಯೂಲ್ ತಿದ್ದುಪಡಿ ಮಾಡಿದಾಗ, ಪಕ್ಷಾಂತರ ನಿಷೇಧ ಕಾಯ್ದೆಯಿಂದ ಪಾರಾಗಬೇಕಾದರೆ ಕನಿಷ್ಠ ಎರಡು ಮೂರಾಂಶದಷ್ಟು ಶಾಸಕರು ಒಟ್ಟಾಗಿರಬೇಕು ಎಂದು ಬದಲಾಯಿಸಲಾಗಿತ್ತು.
ಶಿವಸೇನೆಯ ಸದ್ಯದ ಬಲ 55 ಹಾಗೂ ಇದರಲ್ಲಿ ಎರಡು ಮೂರಾಂಶ ಎಂದರೆ 37 ಆಗುತ್ತದೆ. ತಾಂತ್ರಿಕವಾಗಿ ನೋಡುವುದಾದರೆ, ಶಿಂದೆ ಬಣವು ಸ್ಪೀಕರ್, ಡೆಪ್ಯೂಟಿ ಸ್ಪೀಕರ್ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದಾಗ ಅವರ ಬಳಿ ಪಕ್ಷಾಂತರ ನಿಷೇಧ ಕಾಯ್ದೆಯಿಂದ ಪಾರಾಗುವಷ್ಟು ಸಂಖ್ಯೆ ಇರಲಿಲ್ಲ.
ಸದ್ಯ ಉದ್ಧವ್ ಠಾಕ್ರೆ ತಮ್ಮ ಸ್ವಂತ ಮನೆ ಮಾತೋಶ್ರೀ ಗೆ ಶಿಫ್ಟ್ ಆಗಿದ್ದಾರೆ. ಬಂಡು ಶಾಸಕರ ಅನರ್ಹತೆಯ ವಿಚಾರಣೆಯನ್ನು ಡೆಪ್ಯೂಟಿ ಸ್ಪೀಕರ್ ನರಹರಿ ಸೀತಾರಾಮ ಜಿರ್ವಾಲ್ ಬರುವ ವಾರ ನಡೆಸುವ ಸಾಧ್ಯತೆಯಿದೆ.
ಇದನ್ನು ಓದಿ:ಬಂಡಾಯ ಶಾಸಕರಿಗೆ ರಾವುತ್ ಎಚ್ಚರಿಕೆ: ಶಾಸಕರೊಬ್ಬರ ಕಚೇರಿ ಧ್ವಂಸಗೊಳಿಸಿದ ಕಾರ್ಯಕರ್ತರು!