ಲುದಿಯಾನಾ (ಪಂಜಾಬ್): ಸರ್ಕಾರದ ಮತ್ತು ಯಾವುದೇ ಸಂಸ್ಥೆಗಳ ಸಹಾಯವಿಲ್ಲದೇ ನೂರಕ್ಕೂ ಹೆಚ್ಚು ಅನಾಮಧೇಯ ಶವಗಳನ್ನು ಅಂತ್ಯಸಂಸ್ಕಾರ ಮಾಡುವ ಮೂಲಕ ಇಲ್ಲೊಬ್ಬ ಮಹಿಳೆ ಮಾನವೀಯತೆ ಮೆರೆದಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಅನಾಥ ಶವಗಳಿಗೆ ಅಂತಿಮ ವಿಧಿವಿಧಾನಗಳನ್ನು ನೆರೆವೇರಿಸುವ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ ಈ ಮಹಿಳೆ.
ಹೌದು, ಯಾವುದೇ ಫಲಾಪೇಕ್ಷೆಯಿಲ್ಲದೇ ತಮ್ಮನ್ನು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಲುದಿಯಾನಾ ಮೂಲದ ಪೂನಮ್ ಪತಾನಿಯಾ. 'ಮಾನವೀಯತೆ ದೃಷ್ಟಿಯಿಂದ ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡುತ್ತಿದ್ದೇನೆ. ಈ ಕಾರ್ಯ ನನ್ನ ಬದುಕಿನ ಭಾಗವಾಗಿದೆ' ಎಂದು ಪೂನಮ್ ಪತಾನೀಯಾ ಈ ಟಿವಿ ಭಾರತದೊಂದಿಗೆ ತಮ್ಮ ಮನದ ಮಾತನ್ನು ಬಿಚ್ಚಿಟ್ಟಿದ್ದಾರೆ.
ಕುಟುಂಬದ ಸದಸ್ಯರ ಸಾತ್ : ’’ಒಂದು ದಿನ ನನ್ನ ವಿದ್ಯಾರ್ಥಿಯ ತಂದೆ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆ ನೆರವೇರಿಸಲು ಯಾರು ಮುಂದೆ ಬರಲಿಲ್ಲ. ಅವರ ಆ ಸ್ಥಿತಿ ನನ್ನ ಮನಕಲಕುವಂತೆ ಮಾಡಿತು. ಹೀಗಾಗಿ ಅಂದಿನಿಂದಲೇ ಅನಾಮಧೇಯ ಶವಗಳ ಅಂತಿಮ ವಿಧಿವಿಧಾನಗಳನ್ನು ಮಾಡಲು ನಿರ್ಧರಿಸಿದೆ. ಯಾವುದೇ ಸಂಸ್ಥೆಗಳಿಂದಲೂ ಒಂದು ರೂಪಾಯಿಯನ್ನೂ ತೆಗೆದುಕೊಳ್ಳದೇ ಈ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ಈ ಸೇವೆಗೆ ನನ್ನ ವಿದ್ಯಾರ್ಥಿಗಳು ಮತ್ತು ಕುಟುಂಬದ ಸದಸ್ಯರು ಬೆಂಬಲ ನೀಡುತ್ತಿದ್ದಾರೆ‘‘ ಎಂದು ಹೇಳುತ್ತಾರೆ ಪೂನಂ.
'ಎಲ್ಲ ಪರಿಶೀಲನೆ ನಡೆಸಿದಂತಹ ಶವಗಳ ಹಾಗೂ ಅಪರಿಚಿತ ಶವಗಳ ಸಂಸ್ಕಾರ ಮಾಡುತ್ತೀರಾ ಎಂದು ಪೊಲೀಸರು ನನಗೆ ಹಲವು ಬಾರಿ ಕೇಳಿದ್ದಾರೆ. ಮತ್ತು ಆ ಬಗ್ಗೆ ಮಾಹಿತಿಯನ್ನೂ ನೀಡಿದ್ದಾರೆ. ಅವರ ಮಾಹಿತಿಯಂತೆ ಅನಾಥ ಶವಗಳ ಸಂಸ್ಕಾರವನ್ನು ಮಾಡಿ ಮುಗಿಸಿದ್ದೇನೆ. ಅಂತ್ಯಕ್ರಿಯೆ ಮಾಡುವಾಗ ಕೆಲವು ಬಾರಿ ನಾನಾ ಸಮಸ್ಯೆಗಳನ್ನೂ ಎದುರಿದ್ದು ಕೂಡಾ ಇದೆ ಅಂತಾರೆ ಪೂನಂ.
ಕುಟುಂಬದಲ್ಲಿ ಹೆಚ್ಚಿನ ಗೌರವ: 'ಮಹಿಳೆಯರು ಅಂತ್ಯಸಂಸ್ಕಾರ ಮಾಡುವ ಕಾರ್ಯದಿಂದ ದೂರ ಉಳಿಯುವುದು ಸಾಮಾನ್ಯವಾಗಿದೆ. ಆದರೆ, ಅಪರಿಚಿತ ಶವಗಳ ಅಂತಿಮ ಕಾರ್ಯಗಳನ್ನು ಈ ಮಹಿಳೆಯೊಬ್ಬರೇ ಮಾಡುತ್ತಿರುವುದು ಗಮನಾರ್ಹ. ಮೊದಮೊದಲು ನಮ್ಮ ಕುಟುಂಬದ ಸದಸ್ಯರಿಗೆ ಈ ಕಾರ್ಯದ ಬಗ್ಗೆ ಹಿಂಜರಿಕೆಯಿತ್ತು. ಆದರೆ, ಸದ್ಯ ಎಲ್ಲಾ ಅರ್ಥ ಮಾಡಿಕೊಂಡಿರುವ ಕುಟುಂಬದ ಸದಸ್ಯರು, ಸಮಾಜದಲ್ಲಿ ಏನಾದರೂ ಬದಲಾವಣೆ ತರಬೇಕು ಎನ್ನುವ ಉದ್ದೇಶದಿಂದ ನನ್ನೊಂದಿಗೆ ಕೈ ಜೋಡಿಸಿದ್ದಾರೆ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಪೂನಂ ಕುಟುಂಬದಲ್ಲಿ ಈಗ ತುಂಬಾ ಗೌರವದಿಂದ ಕಾಣುತ್ತಾರೆ ಎಂದು ಹೇಳಿದ್ದಾರೆ.
ಜಿಮ್ನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ: ಪೂನಮ್ ಅವರ ಸಮಾಜ ಸೇವಾ ಕಾರ್ಯಕ್ಕೆ ಎಲ್ಲೆಡೆಯಿಂದ ತುಂಬಾ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜಿಮ್ ತರಬೇತಿ ನೀಡುವ ಸ್ಥಳಗಳಲ್ಲಂತೂ ಪೂನಮ್ ಅವರು ಸ್ಫೂರ್ತಿಯಾಗಿದ್ದಾರೆ. '2019ರಲ್ಲಿ ನಡೆದ ಅಪಘಾತದಲ್ಲಿ ನಾನು ತೀವ್ರವಾಗಿ ಗಾಯಗೊಂಡಿದ್ದೆ. ನೀವು ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ವೈದ್ಯರು ನನಗೆ ತಿಳಿಸಿದ್ದರು. ಇದರಿಂದ ನಾನು ತುಂಬಾ ಕುಗ್ಗಿ ಹೋಗಿದ್ದೆ. ಆದರೆ, ನಾನು ಯಾವುದೇ ರೀತಿಯಲ್ಲಿ ಭರವಸೆಯನ್ನು ಕಳೆದುಕೊಳ್ಳಲಿಲ್ಲ. ನಿರಂತರವಾಗಿ ವ್ಯಾಯಾಮ ಮತ್ತು ನಿಯಮಿತವಾಗಿ ಆಹಾರ ತೆಗೆದುಕೊಳ್ಳುತ್ತಿದ್ದೆ. ಇದರ ಪರಿಣಾಮ ನನ್ನ ಆರೋಗ್ಯ ನಿಧನವಾಗಿ ಸುಧಾರಿಸಿಕೊಳ್ಳಲು ಸಹಕಾರಿಯಾಯಿತು. ಈಗ ನನ್ನ ಜಿಮ್ನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದೇನೆ' ಎನ್ನುತಾರೆ ಪೂನಮ್.
ರಕ್ತದಾನ ಶಿಬಿರಗಳ ಆಯೋಜನೆ: 'ಪಂಜಾಬ್ನಲ್ಲಿ ದಿನದಿಂದ ದಿನಕ್ಕೆ ಡ್ರಗ್ಸ್ನ ಹಾವಳಿ ಹೆಚ್ಚಾಗುತ್ತದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಯುವಕ ಮತ್ತು ಯವತಿಯರಿಗೆ ತರಬೇತಿ ನೀಡುತ್ತಿದ್ದೇನೆ. ಹೆಣ್ಣು ಮಕ್ಕಳು ಸ್ವಯಂ ರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು ಎನ್ನುತ್ತಾರೆ. ಪೂನಮ್ ತಮ್ಮ ಜಿಮ್ ನಡೆಸುವುದರೊಂದಿಗೆ ವಿವಿಧ ಶಾಲೆಗಳಲ್ಲಿ ಸ್ವಯಂ ರಕ್ಷಣೆ ಬಗ್ಗೆ ತರಬೇತಿಯನ್ನೂ ನೀಡುತ್ತಿದ್ದಾರೆ. ಅವರು ಸಮಾಜ ಸೇವೆ ಮಾಡುವುದರೊಂದಿಗೆ ರಕ್ತದಾನ ಶಿಬಿರಗಳನ್ನೂ ಕೂಡಾ ಆಯೋಜನೆ ಮಾಡುತ್ತಾ ಬರುತ್ತಿದ್ದಾರೆ.
'ಪಂಜಾಬ್ ಯುವ ಸಮುದಾಯ ಡ್ರಗ್ಸ್ ಸುಳಿಯಲ್ಲಿ ಸಿಲುಕಿದೆ. ನಾವು ಈ ಪರಿಸ್ಥತಿಯನ್ನು ಸಂಪೂರ್ಣ ಬದಲಾವಣೆ ಮಾಡಬೇಕಿದೆ. ನಾವು ಯುವ ಸಮುದಾಯವನ್ನು ಸರಿಯಾದ ದಾರಿಯತ್ತ ಕರೆದುಕೊಂಡು ಹೋಗಬೇಕಿದೆ. ಯುವ ಸಮುದಾಯ ಡ್ರಗ್ಸ್ನಿಂದ ದೂರವಾಗಿಸಲು ಅವರಿಗೆ ತರಬೇತಿ ನೀಡುವ ಕಾರ್ಯ ಮಾಡುತ್ತೇನೆ. ಯುವಕರಿಗೆ ಪ್ರೇರಣೆ ಮಾಡುವುದರೊಂದಿಗೆ ಸಮಾಜಸೇವೆ ಹಾಗೂ ಸಮಾಜ ಸುಧಾರಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ ಎನ್ನುತ್ತಾರೆ ಅವರು.
ಪೂನಮ್ ಅವರು ಸರ್ಕಾರ ಯಾವುದೇ ಸಹಾಯವಿಲ್ಲದೇ ಸೇವಾ ಕಾರ್ಯ ಕೈಗೊಳ್ಳುವ ಮೂಲಕ ಜನ ಮೆಚ್ಚುಗೆ ಗಳಿಸಿದ್ದಾರೆ. ಅವರ ಸೇವಾ ಕಾರ್ಯಕ್ಕೆ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರು ಕೂಡಾ ಸಾತ್ ನೀಡಿದ್ದಾರೆ.
ಇದನ್ನೂ ಓದಿ: ಸಾಫ್ಟ್‌ವೇರ್ ಬಿಟ್ಟು ಬೊಟಿಕ್ ಆರಂಭಿಸಿದ ಮಹಿಳೆ: ಈಗ ಕೋಟಿ ರೂಪಾಯಿ ಉದ್ಯಮದ ಒಡತಿ!