ಲಖನೌ(ಉತ್ತರ ಪ್ರದೇಶ): ಹುಟ್ಟುಹಬ್ಬದ ಪಾರ್ಟಿಯ ವೇಳೆ ವಾಣಿಜ್ಯ ವಿಭಾಗದ ಕ್ಯಾಂಟೀನ್‌ನಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ಘರ್ಷಣೆ ನಡೆದಿದ್ದು, ಇದರ ಪರಿಣಾಮವಾಗಿ ಲಖನೌ ವಿಶ್ವವಿದ್ಯಾಲಯ ಕ್ಯಾಂಟೀನ್‌ಗಳಲ್ಲಿ ಇನ್ನು ಮುಂದೆ ಯಾವುದೇ ಪಾರ್ಟಿ, ಆಚರಣೆಗಳನ್ನು ಮಾಡದಂತೆ ನಿಷೇಧಿಸಿದೆ.
ವಿಶ್ವವಿದ್ಯಾಲಯದ ಪ್ರಾಕ್ಟರ್ ಕಚೇರಿ, ಕ್ಯಾಂಟೀನ್‌ಗಳಲ್ಲಿ ಎಲ್ಲ ರೀತಿಯ ಆಚರಣೆಗಳನ್ನು ನಿಷೇಧಿಸುವಂತೆ ನಿರ್ದೇಶನ ನೀಡಿದೆ. ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲಾ ಕ್ಯಾಂಟೀನ್ ಮಾಲೀಕರಿಗೆ ಕಡ್ಡಾಯ ಮಾರ್ಗಸೂಚಿಗಳನ್ನು ಹೊರಡಿಸಿದೆ. ಕ್ಯಾಂಟೀನ್‌ಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆಯೇ ಎಂದು ಮಾಲೀಕರು ಖಚಿತಪಡಿಸಿಕೊಳ್ಳಬೇಕು ಎಂದು ಇದೇ ವೇಳೆ ಖಡಕ್ ಸೂಚನೆ ನೀಡಲಾಗಿದೆ.
ಕ್ಯಾಂಟೀನ್‌ಗಳಲ್ಲಿ ಸಂಭ್ರಮಾಚರಣೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕ್ಯಾಂಪಸ್ ಶಿಸ್ತಿಗೆ ಅಡ್ಡಿಪಡಿಸುವಂತೆ ಜಗಳ ಅಥವಾ ವಾದಗಳಲ್ಲಿ ಭಾಗಿಯಾಗುತ್ತಿದ್ದಾರೆ. ವಿದ್ಯಾರ್ಥಿಗಳು ಕ್ಯಾಂಟೀನ್‌ಗಳಲ್ಲಿ ಯಾವುದೇ ಆಚರಣೆಗಳನ್ನು ನಡೆಸದಂತೆ ಮಾಲೀಕರು ಎಚ್ಚರ ವಹಿಸಬೇಕು. ವಿದ್ಯಾರ್ಥಿಗಳು ಒತ್ತಾಯಿಸಿದರೂ ಕಡ್ಡಾಯವಾಗಿ ಆಚರಣೆ ಮಾಡದಂತೆ ನೋಡಿಕೊಳ್ಳಬೇಕು ಎಂದು ಮುಖ್ಯ ಪ್ರಾಕ್ಟರ್ ಪ್ರೊ.ರಾಕೇಶ್ ದ್ವಿವೇದಿ ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ದ್ವಿಚಕ್ರ ಅಥವಾ ಚತುಷ್ಚಕ್ರ ವಾಹನಗಳನ್ನು ಕ್ಯಾಂಟೀನ್ ಹೊರಗಡೆ ನಿಲ್ಲಿಸಲು ಅನುಮತಿ ಇಲ್ಲ. ವಿದ್ಯಾರ್ಥಿಗಳಲ್ಲದೇ ಯಾವುದೇ ಹೊರಗಿನ ವ್ಯಕ್ತಿಗಳು ಕ್ಯಾಂಟೀನ್ ಸೌಲಭ್ಯ ಬಳಸದಂತೆ ನೋಡಿಕೊಳ್ಳುವುದು ಎಂದು ಕ್ಯಾಂಟೀನ್ ನಡೆಸುತ್ತಿರುವವರ ಜವಾಬ್ದಾರಿ ಎಂದಿದ್ದಾರೆ.
ಇದನ್ನೂ ಓದಿ: ಮಂಗಳೂರಲ್ಲಿ ಶಾಲಾ ಮಕ್ಕಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ.. ಪೋಷಕರಿಂದ ವಿದ್ಯಾರ್ಥಿಗೆ ಥಳಿತ