ಚಿತ್ತೂರು: ಪಾಗಲ್ ಪ್ರೇಮಿಯೊಬ್ಬ ಯುವತಿ ಮೇಲೆ ಚಾಕುವಿನಿಂದ ದಾಳಿ ನಡೆಸಿ ಕೊಲೆ ಮಾಡಿದ್ದಲ್ಲದೇ ಬಳಿಕ ತಾನೂ ಕತ್ತು ಕೊಯ್ದುಕೊಂಡಿರುವ ಘಟನೆ ಇಲ್ಲಿನ ಸಾಂಬಯ್ಯ ಕಂಡ್ರಿಗ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಯುವತಿ ಸುಶ್ಮಿತಾ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಅದೇ ಗ್ರಾಮದ ಯುವಕ ಚಿನ್ನ ಗ್ರಾನೈಟ್ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಕೆಲ ದಿನಗಳ ಹಿಂದೆ ಪ್ರೀತಿ ಹೆಸರಲ್ಲಿ ಸುಶ್ಮಿತಾಗೆ ಚಿನ್ನ ಕಿರುಕುಳ ಕೊಡುತ್ತಿದ್ದನಂತೆ. ಸುಶ್ಮಿತಾಗೆ ನನ್ನ ಪ್ರೀತಿಸುವಂತೆ ಚಿನ್ನ ಕಾಟ ಕೊಡುತ್ತಿದ್ದನಂತೆ.
ಚಿನ್ನನ ಕಾಟಕ್ಕೆ ಬೇಸತ್ತ ಸುಶ್ಮಿತಾ ಗುಡಿಪಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಇದರಿಂದ ಕೋಪಗೊಂಡ ಚಿನ್ನ ಶುಕ್ರವಾರ ಬೆಳಗ್ಗೆ ಮನೆಯಲ್ಲಿ ಒಂಟಿಯಾಗಿದ್ದ ಸುಶ್ಮಿತಾಳ ಮೇಲೆ ಮನಸೋಇಚ್ಛೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಸುಶ್ಮಿತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಯುವತಿ ಸಾವನ್ನಪ್ಪಿದ ಬಳಿಕ ಚಿನ್ನ ತನ್ನ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಂದ ಯುವತಿ ಸಂಬಂಧಿಕರು ಮೂರ್ಛೆ ಬಿದ್ದ ಚಿನ್ನನ ಮೇಲೆ ಕಲ್ಲಿನಿಂದ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಚಿನ್ನ ಸಹ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈ ಘಟನೆ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.
ಈ ಬಗ್ಗೆ ಗುಡಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.