ಹೈದರಾಬಾದ್ : ನಮ್ಮ ಯಾವುದೇ ವಸ್ತುಗಳು ಕಳೆದು ಹೋದರೆ ಕೆಲವೊಮ್ಮೆ ದಿಕ್ಕು ತೋಚದೆ ತಲೆ ಮೇಲೆ ಕೈ ಇಟ್ಟು ಕುಳಿತುಕೊಳ್ಳುತ್ತೇವೆ. ಕೆಲವರು ವಸ್ತು ಕಳೆದು ಹೋದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಇನ್ನೂ ಕೆಲವರು ಇಂದು ವ್ಯಾಪಕವಾಗಿ ಬಳಕೆಯಾಗುವ ಸಾಮಾಜಿಕ ಜಾಲತಾಣ, ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮ ಕಳೆದುಹೋದ ವಸ್ತುಗಳನ್ನು ಪತ್ತೆ ಹಚ್ಚುತ್ತಾರೆ.
ಅಂತೆಯೇ ವ್ಯಕ್ತಿಯೊಬ್ಬರು ತಾವು ಕೇರಳದಲ್ಲಿ ಕಳೆದುಕೊಂಡಿದ್ದ ಏರ್ಪಾಡ್ಸ್ಅನ್ನು ದೂರದ ಗೋವಾದಲ್ಲಿ ಪತ್ತೆ ಹಚ್ಚಿ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ತನ್ನ ಏರ್ಪಾಡ್ಸ್ನ್ನು ಹುಡುಕಿಕೊಟ್ಟ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಮುಂಬೈ ಮೂಲದ ಆನ್ಲೈನ್ ಮಾರ್ಕೆಟಿಂಗ್ ವೃತ್ತಿಪರರಾದ ನಿಖಿಲ್ ಜೈನ್ ಎಂಬವರು ಇತ್ತೀಚೆಗೆ ಕೇರಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ತಮ್ಮ ಏರ್ಪಾಡ್ಸ್ಗಳನ್ನು ಕಳೆದುಕೊಂಡಿದ್ದರು. ಬಳಿಕ ಈ ಏರ್ಪಾಡ್ಸ್ನ ಅನ್ವೇಷಣೆ ವೇಳೆ ಇದು ಗೋವಾದಲ್ಲಿ ಇರುವುದು ಪತ್ತೆಯಾಗಿತ್ತು. ಈ ಬಗ್ಗೆ ಸಹಾಯ ಕೋರಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ವೊಂದನ್ನು ಹಾಕಿದ್ದರು. ಇದಕ್ಕೆ ಸ್ಪಂದಿಸಿರುವ ಪೊಲೀಸರು ಕಳೆದುಹೋಗಿದ್ದ ಏರ್ಪಾಡ್ಸ್ಅನ್ನು ಪತ್ತೆ ಹಚ್ಚಿ ನಿಖಿಲ್ ಜೈನ್ಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅದಕ್ಕೆ ಪ್ರತಿಯಾಗಿ ಏರ್ಪಾಡ್ಸ್ಗಳನ್ನು ಹುಡುಕಿಕೊಟ್ಟ ಗೋವಾ ಮತ್ತು ಕೇರಳ ಪೊಲೀಸರಿಗೆ ಧನ್ಯವಾದವನ್ನು ಜೈನ್ ತಿಳಿಸಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ನಿಖಿಲ್, ನೀವು ನಂಬಬಹುದೇ!!? ಏಂಜಲ್ ಸಂಕೇತ್, ಗೋವಾ ಪೊಲೀಸ್, ಕೇರಳ ಪೊಲೀಸ್, ಟ್ವಿಟರ್, ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು! ಎಂತಹ ಸುಂದರ ಕಥೆ. ಪ್ರಪಂಚವು ತುಂಬಾ ದೊಡ್ಡದಾಗಿದೆ ಮತ್ತು ಇನ್ನೂ ಚಿಕ್ಕದಾಗಿದೆ ಎಂದು ಬರೆದುಕೊಂಡಿದ್ದಾರೆ.
ಕೇರಳದಲ್ಲಿ ಕಳೆದುಹೋಗಿದ್ದ ಏರ್ಪಾಡ್ಸ್ ಟ್ರಾಕಿಂಗ್ ವೇಳೆ ಗೋವಾದ ಮಾರ್ಗಾಂವ್ ಪೊಲೀಸ್ ಠಾಣೆಯಲ್ಲಿರುವುದು ಪತ್ತೆಯಾಗಿತ್ತು. ಈ ಬಗ್ಗೆ ನಿಖಿಲ್ ಮತ್ತೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಅಲ್ಲದೆ ಕಳೆದುಹೋದ ಏರ್ಪಾಡ್ಸ್ ಸಿಕ್ಕಿದ್ದ ವ್ಯಕ್ತಿ ಪೊಲೀಸ್ ಠಾಣೆಗೆ ನೀಡಿರಬಹುದೆಂದು ನಿಖಿಲ್ ಭಾವಿಸಿದ್ದರು.
ಇದಕ್ಕೂ ಮುನ್ನ ಪೋಸ್ಟ್ ಹಾಕಿದ್ದ ನಿಖಿಲ್, ನಾನು ಕಳೆದ ಕೆಲವು ದಿನಗಳ ಹಿಂದೆ ಕೇರಳದಲ್ಲಿ ನನ್ನ ಏರ್ಪಾಡ್ಸ್ಅನ್ನು ಕಳೆದುಕೊಂಡಿದ್ದೆ. ವ್ಯಕ್ತಿಯೊಬ್ಬ ಗೋವಾದಲ್ಲಿ ಏರ್ಪಾಡ್ಸ್ನೊಂದಿಗೆ ಕಳೆದ ಎರಡು ದಿನಗಳಿಂದ ಸಂಚರಿಸುತ್ತಿದ್ದಾನೆ. ದಕ್ಷಿಣ ಗೋವಾದ ಸಾಲ್ಸೆಟೆಯ ಡಾ. ಅಲ್ವಾರೊ ಡಿ ಲೊಯೊಲಾ ಫುರ್ಟಾಡೊ ರಸ್ತೆಯಲ್ಲಿ ಆ ವ್ಯಕ್ತಿ ಸಂಚರಿಸುತ್ತಿದ್ದಾನೆ. ಸುತ್ತಲೂ ಯಾರಾದರೂ ಇದ್ದರೆ ಏರ್ಪಾಡ್ಸ್ ಮರಳಿ ಪಡೆಯಲು ಸಹಾಯ ಮಾಡಿ ಎಂದು ಬರೆದುಕೊಂಡಿದ್ದರು. ಅಂತೂ ವ್ಯಕ್ತಿ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ತಾನು ಕಳೆದುಕೊಂಡಿದ್ದ ಏರ್ಪಾಡ್ಸ್ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : ಮೂರನೇ ವ್ಯಕ್ತಿಯೊಂದಿಗೆ ತಮ್ಮ ದತ್ತಾಂಶ ಸೋರಿಕೆ ಬಗ್ಗೆ ಚಿಂತಿತರಾಗಿದ್ದಾರೆ 10ರಲ್ಲಿ 6 ಭಾರತೀಯರು