ಹುಸ್ನಾಬಾದ್ (ತೆಲಂಗಾಣ) : ನಾವು ಯಾವುದೋ ಗೊತ್ತಿರದ ಊರು, ದಾರಿಯಲ್ಲಿ ಸಾಗುವಾಗ ಗೂಗಲ್ಮ್ಯಾಪ್ ಸಹಾಯ ಪಡೆಯುತ್ತೇವೆ. ಅದು ತೋರಿಸಿದ ದಿಕ್ಕಿನೆಡೆಗೆ ಸಾಗುತ್ತೇವೆ. ಕೆಲವೊಮ್ಮೆ ದಾರಿ ತಪ್ಪಿ ಪೇಚಿಗೆ ಬಿದ್ದ ಘಟನೆಗಳೂ ಇವೆ. ಇಂಥದ್ದೇ ಸಂಗತಿಯೊಂದು ತೆಲಂಗಾಣದಲ್ಲಿ ನಡೆದಿದೆ. ಗೂಗಲ್ಮ್ಯಾಪ್ ನೆಚ್ಚಿಕೊಂಡು ಹೋದ ಲಾರಿಯೊಂದು ನೀರಿನಲ್ಲಿ ಮುಳುಗಿದೆ. ಬಳಿಕ ಗ್ರಾಮಸ್ಥರ ಸಹಾಯ ಪಡೆದು ಅದನ್ನು ಮೇಲೆತ್ತಲಾಗಿದೆ.
ಘಟನೆಯ ವಿವರ: ತಮಿಳುನಾಡಿನ ಲಾರಿಯೊಂದು ಮಂಗಳವಾರ ರಾತ್ರಿ ತೆಲಂಗಾಣದ ಸಿದ್ದಿಪೇಟೆ ಕಡೆಗೆ ಸಾಗುತ್ತಿತ್ತು. ಈ ವೇಳೆ, ಲಾರಿ ಚಾಲಕ ಮತ್ತು ಕ್ಲೀನರ್ಗೆ ದಾರಿ ಬಗ್ಗೆ ಮಾಹಿತಿ ಇರಲಿಲ್ಲ. ಹೀಗಾಗಿ ಇಬ್ಬರೂ ಗೂಗಲ್ ಮ್ಯಾಪ್ ಹಾಕಿಕೊಂಡಿದ್ದಾರೆ. ಲಾರಿ ಜೆರ್ಯಾಲ ಮಾರ್ಗವಾಗಿ ಹುಸ್ನಾಬಾದ್ಗೆ ಹೋಗುತ್ತಿದ್ದಾಗ, ಗೌರವೆಲ್ಲಿ ಜಲಾಶಯದ ಬಳಿ ದಾರಿ ತಪ್ಪಿದೆ.
ಮಧ್ಯರಾತ್ರಿ 2 ಗಂಟೆ ಸುಮಾರಿನಲ್ಲಿ ಚಾಲಕ ಶಿವ ಮತ್ತು ಕ್ಲೀನರ್ ಮೊಂಡಯ್ಯ ಅವರು ಗೂಗಲ್ಮ್ಯಾಪ್ ನಂಬಿಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ನೀರು ಬಂದಿದೆ. ಕತ್ತಲಲ್ಲಿ ಕಾಣಿಸದೇ ಮಳೆ ನೀರು ಎಂದುಕೊಂಡು ಮುಂದೆ ಸಾಗಿದ್ದಾರೆ. ಬಳಿಕ ನೀರು ಹೆಚ್ಚಾಗುತ್ತಾ ಸಾಗಿದೆ. ಲಾರಿ ಸಾಗಿದಂತೆ ಆಳ ಹೆಚ್ಚಾಗಿದೆ. ನೀರು ಕ್ಯಾಬಿನ್ ಒಳಗೆ ನುಗ್ಗಿದೆ. ತಕ್ಷಣವೇ ಚಾಲಕ ವಾಹನ ನಿಲ್ಲಿಸಿದ್ದಾನೆ. ನೀರು ಲಾರಿಯನ್ನು ಮುಳುಗಿಸಿದೆ. ಇದರಿಂದ ಎಂಜಿನ್ ಆಫ್ ಆಗಿದೆ.
ಇಬ್ಬರೂ ಹೊರಬಂದು ನೋಡಿದಾಗ ಅದು ಜಲಾಶಯದ ಹಿನ್ನೀರು ಆಗಿತ್ತು. ಅಚ್ಚರಿಗೊಂಡ ಚಾಲಕ, ಅಲ್ಲಿಂದ ಈಜಿಕೊಂಡು ಬಂದು ಪಕ್ಕದ ಗ್ರಾಮವಾದ ರಾಮಾವರಂಗೆ ಬಂದಿದ್ದಾರೆ. ಅಲ್ಲಿದ್ದ ಜನರನ್ನು ವಿಚಾರಿಸಿದಾಗ, ಆ ರಸ್ತೆಯನ್ನು ಮುಚ್ಚಲಾಗಿದೆ. ಅಲ್ಲಿ ಜಲಾಶಯದ ಹಿನ್ನೀರು ನುಗ್ಗಿದೆ ಎಂದು ತಿಳಿಸಿದ್ದಾರೆ. ಬಳಿಕ ಅವರು ಗೂಗಲ್ಮ್ಯಾಪ್ ಮಾಡಿದ ಅನಾಹುತದಿಂದಾಗಿ ಲಾರಿ ಮತ್ತು ಅವರು ನೀರುಪಾಲಾಗುವುದು ತಪ್ಪಿದೆ.
ಹಗ್ಗ ಕಟ್ಟಿ ಲಾರಿ ಹೊರಕ್ಕೆ: ನಡೆದ ಘಟನೆಯನ್ನು ಗ್ರಾಮಸ್ಥರಿಗೆ ತಿಳಿಸಿದ ಚಾಲಕ ಶಿವ ಸಹಾಯ ಕೋರಿದ್ದಾರೆ. ಬೆಳಗಾದ ಬಳಿಕ ಗ್ರಾಮಸ್ಥರು ಲಾರಿ ಸಿಲುಕಿಕೊಂಡ ಸ್ಥಳಕ್ಕೆ ಆಗಮಿಸಿದ್ದಾರೆ. ಲಾರಿಗೆ ಹಗ್ಗಗಳನ್ನು ಬಿಗಿದು ಕಷ್ಟಪಟ್ಟು ಹಿಂದಕ್ಕೆ ಎಳೆದಿದ್ದಾರೆ. ಹರಸಾಹಸಪಟ್ಟು ಲಾರಿಯನ್ನು ದಡಕ್ಕೆ ಎಳೆಯಲಾಗಿದೆ. ಬಳಿಕ ನಂದಾರಾಮ್ ಸ್ಟೇಜ್ನ ಬೈಪಾಸ್ ರಸ್ತೆಯ ಮೂಲಕ ವಾಹನವನ್ನು ಕಳುಹಿಸಲಾಗಿದೆ.
ತಪ್ಪಾಗಿದ್ದೇನು?: ಸಿದ್ದಿಪೇಟೆ ಜಿಲ್ಲೆಯ ಅಕ್ಕಣ್ಣಪೇಟೆ ಮಂಡಲದ ಗುಡತಿಪಲ್ಲಿಯಲ್ಲಿ ಗೌರವಳ್ಳಿ ಯೋಜನೆಯ ಭಾಗವಾಗಿ ಜಲಾಶಯ ನಿರ್ಮಾಣ ಮಾಡಲಾಗಿದೆ. ಹಿನ್ನೀರಿನಿಂದಾಗಿ ಹಳೆಯ ರಸ್ತೆಗಳು ನೀರಿನಲ್ಲಿ ಮುಳುಗಿವೆ. ಗೂಗಲ್ಮ್ಯಾಪ್ನಲ್ಲಿ ಮೊದಲ ರಸ್ತೆಗಳೇ ಇನ್ನು ತೋರಿಸುತ್ತಿದೆ. ಹೀಗಾಗಿ ವಾಹನಗಳು ತಪ್ಪಿ ಇದೇ ಮಾರ್ಗವಾಗಿ ಬಂದು ಸಿಲುಕೊಳ್ಳುತ್ತಿವೆ. ತಕ್ಷಣವೇ ಮ್ಯಾಪ್ನಲ್ಲಿ ಮಾರ್ಪಾಡು ಮಾಡಬೇಕಿದೆ ಎಂಬುದು ಪಕ್ಕದ ಗ್ರಾಮಸ್ಥರ ಆಗ್ರಹವಾಗಿದೆ.
ಇದನ್ನೂ ಓದಿ: ದಾವಣಗೆರೆ: ರೈಲ್ವೆ ಬ್ರಿಡ್ಜ್ಗೆ ಗುದ್ದಿ ಕೆಳಗೆ ಬಿದ್ದ ಕೇರಳದ ಯುವಕರಿಬ್ಬರು ಸಾವು