ನವದೆಹಲಿ: ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಂಡ ಬಳಿಕ ಎಲ್ಲ ಸೌಲಭ್ಯಗಳಿಂದ ವಂಚಿತರಾಗಿರುವ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸರ್ಕಾರ ನೀಡಿರುವ ಮನೆಯನ್ನು ಖಾಲಿ ಮಾಡುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಲೋಕಸಭೆಯ ವಸತಿ ಸಮಿತಿಯು ರಾಹುಲ್ ಗಾಂಧಿಗೆ ಸರ್ಕಾರ ಮಂಜೂರು ಮಾಡಿದ ಬಂಗಲೆಯನ್ನು ಶೀಘ್ರವೇ ತೊರೆಯುವಂತೆ ಸೂಚಿಸಿ ಸುತ್ತೋಲೆಯನ್ನು ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರ ರಾಜಧಾನಿ ದಿಲ್ಲಿಯ ತುಘಲಕ್ ಲೇನ್ನಲ್ಲಿರುವ 12 ನೇ ಬಂಗಲೆಯನ್ನು ಸಂಸದರಾಗಿದ್ದ ರಾಹುಲ್ ಗಾಂಧಿ ಅವರಿಗೆ ನೀಡಲಾಗಿತ್ತು. ಇದೀಗ ಮಾನಹಾನಿ ಪ್ರಕರಣದಲ್ಲಿ 2 ವರ್ಷ ಶಿಕ್ಷೆಗೆ ಒಳಗಾಗಿದ್ದು, ಸರ್ಕಾರಿ ಸೌಲಭ್ಯಗಳನ್ನು ಕಳೆದುಕೊಂಡಿದ್ದಾರೆ. ಅದರಂತೆ ಲೋಕಸಭೆಯ ವಸತಿ ಸಮಿತಿಯಿಂದ ಮಂಜೂರಾಗಿದ್ದ ನಿವಾಸವನ್ನು ಏಪ್ರಿಲ್ 22 ರೊಳಗೆ ತೆರವು ಮಾಡುವಂತೆ ಗಡುವು ನೀಡಲಾಗಿದೆ.
ರಾಹುಲ್ ಗಾಂಧಿ ನಿವಾಸ ತೆರವುಗೊಳಿಸಲು ನೀಡಲಾದ ನೋಟಿಸ್ ಅನ್ನು ವಿಸ್ತರಿಸಲು ಕೋರಿ ಪತ್ರ ಬರೆಯಬಹುದು. ಈ ವಿನಂತಿಯನ್ನು ಸಮಿತಿಯು ಪರಿಗಣಿಸಬಹುದು. ಲೋಕಸಭೆ ಸೆಕ್ರೆಟರಿಯೇಟ್ ಹೊರಡಿಸಿದ ಅಧಿಸೂಚನೆಯನ್ನು ಎಸ್ಟೇಟ್ ನಿರ್ದೇಶನಾಲಯ, ದಿಲ್ಲಿ ಮುನ್ಸಿಪಲ್ ಕೌನ್ಸಿಲ್ ಸೇರಿದಂತೆ ವಿವಿಧ ಇಲಾಖೆಗಳಿಗೆ ವರ್ಗಾಯಿಸಲಾಗುತ್ತದೆ. ಸಂಸತ್ ಸದಸ್ಯರಾಗಿದ್ದಾಗ ರಾಹುಲ್ಗೆ ಲಭ್ಯವಿರುವ ಎಲ್ಲಾ ಪ್ರಯೋಜನಗಳನ್ನು ಅಖೈರುಗೊಳಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುಜರಾತ್‌ನ ಸೂರತ್ ನ್ಯಾಯಾಲಯವು ಮಾರ್ಚ್ 23 ರಂದು ರಾಹುಲ್ ಗಾಂಧಿಯನ್ನು ಕ್ರಿಮಿನಲ್ ಮಾನ ಹಾನಿ ಪ್ರಕರಣವೊಂದರಲ್ಲಿ ದೋಷಿ ಎಂದು ಘೋಷಿಸಿತು. ಅಲ್ಲದೇ, 2 ವರ್ಷ ಜೈಲು ಶಿಕ್ಷೆ ವಿಧಿಸಿತು. ಇದರಿಂದ ರಾಹುಲ್ ಸಂಸತ್ ಸದಸ್ಯರ ನಿಯಮ ಅನ್ವಯ ಲೋಕಸಭಾ ಸದಸ್ಯರಾಗಿ ಸ್ವಯಂಚಾಲಿತವಾಗಿ ಅನರ್ಹಗೊಂಡರು. ಅನರ್ಹಗೊಂಡ ಲೋಕಸಭಾ ಸದಸ್ಯರು ಸದಸ್ಯತ್ವ ಕಳೆದುಕೊಂಡ ಒಂದು ತಿಂಗಳೊಳಗೆ ಅಧಿಕೃತ ಬಂಗಲೆಯನ್ನು ಖಾಲಿ ಮಾಡಬೇಕು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಹುಲ್ ಬೆಂಬಲಿಸಿ ಪ್ರತಿಭಟನೆ: ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿದ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶದ ಆಸ್ತಿಯನ್ನು ಕೊಳ್ಳೆ ಹೊಡೆದು ವಿದೇಶಕ್ಕೆ ತೆರಳಿದ ಕಳ್ಳರ ವಿರುದ್ಧ ಟೀಕಿಸಿದ್ದಕ್ಕೆ ರಾಹುಲ್ರಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಇನ್ನೊಂದೆಡೆ ಬಿಜೆಪಿ, ರಾಹುಲ್ ವಿವಾದಿತ ಹೇಳಿಕೆ ಹಿಂದುಳಿವ ವರ್ಗಕ್ಕೆ ಮಾಡುತ್ತಿರುವ ಅವಮಾನ ಎಂದು ಹೇಳಿದೆ. ರಾಹುಲ್ ಗಾಂಧಿ ವಿರುದ್ಧ ಕೈಗೊಳ್ಳಲಾದ ಕ್ರಮದ ವಿರುದ್ಧ ಕಾನೂನು ಮತ್ತು ರಾಜಕೀಯವಾಗಿ ಹೋರಾಡುವುದಾಗಿ ಕಾಂಗ್ರೆಸ್ ಹೇಳಿದೆ.
ಪ್ರಕರಣವೇನು?: 2019 ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಅವರು ಮೋದಿ ಉಪನಾಮವನ್ನು ಬಳಸಿ ಟೀಕಿಸಿದ್ದರು. ಇದು ಆ ಹೆಸರಿನ ಜೊತೆಗೆ ಸಮುದಾಯಕ್ಕೆ ಮಾಡಿದ ಅವಮಾನ, ಮಾನ ಹಾನಿ ಎಂದು ಗುಜರಾತ್ ಶಾಸಕರೊಬ್ಬರು ಪ್ರಕರಣ ದಾಖಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಸೂರತ್ ಕೋರ್ಟ್ ರಾಹುಲ್ ಅಪರಾಧಿ ಎಂದು ಘೋಷಿಸಿ 2 ವರ್ಷ ಶಿಕ್ಷೆ ವಿಧಿಸಿದೆ.
ಓದಿ: ಮಂದೀಪ್ ಸಿಧು ಜನಪ್ರಿಯತೆಯ ಲಾಭ ಪಡೆಯಲು ಮುಂದಾಗಿದ್ದ ಅಮೃತಪಾಲ್..!