ಚಿತ್ತೂರು (ಆಂಧ್ರಪ್ರದೇಶ) : ಕಟ್ಟಿಕೊಂಡ ಹೆಂಡತಿ ಹಾಗೂ ಕುಟುಂಬಸ್ಥರ ಜೊತೆ ಜಗಳ ಮಾಡಿಕೊಂಡು ಮನನೊಂದಿರುವ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಫೇಸ್ಬುಕ್ನಲ್ಲಿ ಲೈವ್ ವಿಡಿಯೋ ಮಾಡುವ ಮೂಲಕ ನೇಣು ಬಿಗಿದುಕೊಂಡಿದ್ದಾನೆ. ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಈ ಘಟನೆ ನಡೆದಿದ್ದು, ಉದಯ್ ಭಾಸ್ಕರ್ ಎಂಬಾತ ನೇಣಿಗೆ ಶರಣಾಗಿದ್ದಾನೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಸೋನಿ ಎಂಬ ಯುವತಿ ಜೊತೆ ವಿವಾಹವಾಗಿದ್ದ. ಖಾಸಗಿ ಆಸ್ಪತ್ರೆಯಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದ ಈತ, ಕಳೆದ ಕೆಲ ದಿನಗಳಿಂದ ಹೆಂಡತಿ ಹಾಗೂ ಕುಟುಂಬದೊಂದಿಗೆ ಜಗಳವಾಡಿಕೊಂಡಿದ್ದ. ಹೀಗಾಗಿ, ಹೆಂಡತಿ ಹೆತ್ತವರ ಮನೆ ಸೇರಿದ್ದಳು. ಇದರಿಂದ ಆತ ಮನನೊಂದಿದ್ದ.
ಇದನ್ನೂ ಓದಿರಿ: 15ರ ಬಾಲಕಿ ಮೇಲೆ ಗ್ಯಾಂಗ್ರೇಪ್, ಸಿಗರೇಟ್ನಿಂದ ಎದೆ ಸುಟ್ಟು, ಕೊಲೆ ; ಮರಕ್ಕೆ ಮೃತದೇಹ ನೇಣು
ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಯ ವಿಡಿಯೋ ಫೇಸ್ಬುಕ್ನಲ್ಲಿ ಲೈವ್ ಹರಿಬಿಟ್ಟು, ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದರ ವೀಕ್ಷಣೆ ಮಾಡಿರುವ ಆತನ ಕೆಲ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಬರುವಷ್ಟರಲ್ಲಿ ಆತ ಸಾವನ್ನಪ್ಪಿದ್ದಾನೆ.
ಇದರ ಬಗ್ಗೆ ಪತ್ನಿ ಸೋನಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಭಾಸ್ಕರ್ ಕುಡಿತದ ಚಟ ಹೊಂದಿದ್ದ. ಮೇಲಿಂದ ಮೇಲೆ ನಿಂದನೆ ಮಾಡ್ತಿದ್ದ ಎಂದು ಪತ್ನಿ ತಿಳಿಸಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ತಾನು ದೂರು ಸಹ ದಾಖಲು ಮಾಡಿದ್ದಾಗಿ ತಿಳಿಸಿದ್ದಾಳೆ.
ಉದಯ್ ಭಾಸ್ಕರ್ ಮೃತದೇಹ ವಶಕ್ಕೆ ಪಡೆದಿರುವ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.